– ಸ್ಪಾಟ್ ಫಿಕ್ಸಿಂಗ್ ಅಪ್ರೋಚ್ ಮಾಹಿತಿ ನೀಡಲು ವಿಫಲ
ಇಸ್ಲಾಮಾಬಾದ್: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ 3 ವರ್ಷ ನಿಷೇಧಿಸಿದೆ.
ಬೋರ್ಡ್ ಇಂದು ನಿಷೇಧ ಕುರಿತ ಮಾಹಿತಿಯನ್ನು ನೀಡಿದೆ. ಆದರೆ ಉಮರ್ ಅಕ್ಮಲ್ ಯಾವ ತಪ್ಪಿನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಅಪ್ರೋಚ್ ಆಗಿರುವ ಕುರಿತು ಕ್ರಿಕೆಟ್ ಬೋರ್ಡಿಗೆ ಮಾಹಿತಿ ನೀಡಲು ವಿಫಲರಾದ ಕಾರಣದಿಂದ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
Advertisement
Advertisement
ಅಕ್ಮಲ್ ವಿರುದ್ಧ ಎರಡು ತಿಂಗಳ ಹಿಂದೆ ಭ್ರಷ್ಟಾಚಾರ ನೀತಿ ಸಂಹಿತೆ ಅಡಿ ತನಿಖೆ ಆರಂಭಿಸಲಾಗಿತ್ತು. ನಿಷೇಧ ಕುರಿತು ಮಾಹಿತಿ ನೀಡಿ ಪಿಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ನಿವೃತ್ತ ನ್ಯಾಯಮೂರ್ತಿ ಫಜಲ್ ಇ ಮಿರಾನ್ ನೇತೃತ್ವದ ಶಿಸ್ತು ಸಮಿತಿ 3 ವರ್ಷ ನಿಷೇಧ ವಿಧಿಸಿದೆ. ಫೆ.20 ರಂದು ಅಕ್ಮಲ್‍ರನ್ನು ಅಮಾನತು ಮಾಡಿ ಆದೇಶ ನೀಡಲಾಗಿತ್ತು.
Advertisement
29 ವರ್ಷದ ಅಕ್ಮಲ್ ಪಾಕ್ ಪರ ಅಕ್ಟೋಬರಿನಲ್ಲಿ ಅಂತಿಮ ಪಂದ್ಯವನ್ನಾಡಿದ್ದರು. ಇದುವರೆಗೂ 21 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಂತಿಮವಾಗಿ ಶ್ರೀಲಂಕಾ ವಿರುದ್ಧದ ಟಿ20 ಟೂರ್ನಿಯಲ್ಲಿ ಭಾಗಿಯಾಗಿದ್ದ ಅಕ್ಮಲ್, ಆಡಿದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.