ಇಸ್ಲಾಮಾಬಾದ್: 40 ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯಲ್ಲಿ 145 ಬಲೂಚ್ ಉಗ್ರರನ್ನು (Balochistan Terrorists) ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ (Pakistan) ಹೇಳಿದೆ.
ಪಾಕಿನ 80ಕ್ಕೂ ಹೆಚ್ಚು ಸೈನಿಕರನ್ನು ಬಲೂಚ್ ಬಂಡುಕೋರರು ಹತ್ಯೆ ಮಾಡಿದ ಬೆನ್ನಲ್ಲೇ ಭಾರೀ ಕಾರ್ಯಾಚರಣೆ ನಡೆಸಿದ ಸೇನೆ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನದ ಸೇನೆಯು ಶನಿವಾರ 92 ಮಂದಿಯನ್ನು ಹತ್ಯೆ ಮಾಡಿದ್ದರೆ ಶುಕ್ರವಾರ 41 ಜನರನ್ನು ಕೊಂದಿದೆ. ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 17 ಮಂದಿ ಭದ್ರತಾ ಪಡೆಯ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ.
ಸಾಮಾನ್ಯ ನಾಗರಿಕರಂತೆ ವೇಷ ಧರಿಸಿದ್ದ ಬಲೂಚ್ ಉಗ್ರರು ಶನಿವಾರ ಆಸ್ಪತ್ರೆ, ಶಾಲೆ, ಬ್ಯಾಂಕುಗಳು ಮತ್ತು ಮಾರುಕಟ್ಟೆಗಳಿಗೆ ನುಗ್ಗಿ ಗುಂಡು ಹಾರಿಸಿದರು. ನಾಗರಿಕರಂತೆ ವೇಷ ಧರಿಸಿ ಬಂದು ಅಂಗಡಿಗಳಲ್ಲಿ ಕೆಲಸ ಮಾಡುವ ಸಾಮಾನ್ಯ ಜನರನ್ನು ವಿವೇಚನೆಯಿಲ್ಲದೆ ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪಾಕಿಸ್ತಾನದ ಕಿರಿಯ ಆಂತರಿಕ ಸಚಿವ ತಲಾಲ್ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ: Budget 2026 | ಇರಾನ್‌ಗೆ ಇಲ್ಲ, ಬಾಂಗ್ಲಾ ಅನುದಾನ ಅರ್ಧ ಕಡಿತ
ಸೇನೆಯ ಪ್ರಕಾರ, ಉಗ್ರರು ಕ್ವೆಟ್ಟಾ, ಮಸ್ತುಂಗ್, ನುಷ್ಕಿ, ದಲ್ಬಂದಿನ್, ಖರನ್, ಪಂಜ್‌ಗುರ್, ಟಂಪ್, ಗ್ವಾದರ್ ಮತ್ತು ಪಾಸ್ನಿ ಸೇರಿದಂತೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಶಾಂತಿಯನ್ನು ಕದಡುವ ಪ್ರಯತ್ನ ನಡೆಸಿದ್ದಾರೆ.
ಆಪರೇಷನ್ ಹೆರೋಫ್ ಫೇಸ್ II ಕಾರ್ಯಾಚರಣೆಯಲ್ಲಿ 80 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಗುಪ್ತಚರ ಸಂಸ್ಥೆಗಳು ಮತ್ತು ಭಯೋತ್ಪಾದನಾ ನಿಗ್ರಹ ಘಟಕಗಳ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಜ.31 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು.

