– 3 ಮಕ್ಕಳೊಂದಿಗೆ ಪಾಕ್ ಗಡಿಯಲ್ಲಿ ಕಾದಿದ್ದ ಹೆಂಡತಿ ಕರೆದೊಯ್ಯಲು ಬಾರದ ಪತಿ
– ನನ್ನ ಪತಿ ಕಾಲ್ ರಿಸೀವ್ ಮಾಡ್ತಿಲ್ಲ ಅಂತ ಮಹಿಳೆ ಕಣ್ಣೀರು
ಮೈಸೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶವು ಮೈಸೂರಿನ ಮುಸ್ಲಿಂ ಮಹಿಳೆಯೊಬ್ಬರು ಕಣ್ಣೀರು ಹಾಕುವಂತೆ ಮಾಡಿದೆ.
ವೀಸಾ ಸಮಸ್ಯೆಯಿಂದ ಪಾಕಿಸ್ತಾನಕ್ಕೆ ಮಹಿಳೆ ಮತ್ತು ಮಕ್ಕಳು ತಲುಪದ ಪ್ರಕರಣದಲ್ಲಿ ಮೈಸೂರಿನ ರಂಷಾ ಎಂಬ ಮಹಿಳೆ ಹಾಗೂ ಮೂರು ಮಕ್ಕಳಿಗೆ ವೀಸಾ ತೊಂದರೆ ಆಗಿದೆ. 8 ವರ್ಷಗಳ ಹಿಂದೆ ಪಾಕಿಸ್ತಾನದ ಮೊಹಮ್ಮದ್ ಫಾರುಕ್ ಎಂಬವವರನ್ನ ಮದುವೆಯಾಗಿದ್ದ ರಂಷಾಗೆ 2, 4 ಹಾಗೂ 7 ವರ್ಷದ ಮೂರು ಮಕ್ಕಳಿವೆ. ರಂಷಾಗೆ ಪಾಕಿಸ್ತಾನ ವೀಸಾ ತೊಂದರೆಯಾದ ಹಿನ್ನೆಲೆ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಇತ್ತ ಮೂರು ಮಕ್ಕಳ ವೀಸಾ ಜುಲೈವರೆಗೆ ಇದ್ದರೂ ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆ ವಾಪಸ್ ಕಳುಹಿಸಲಾಗುತ್ತಿತ್ತು. ಆದರೆ ಮಕ್ಕಳ ಜೊತೆ ತಾಯಿಯೂ ಪಾಕಿಸ್ತಾನಕ್ಕೆ ಬರುವುದಾದರೆ ಸೇರಿಸಿಕೊಳ್ಳುವುದಾಗಿ ಗಂಡ ಷರತ್ತು ಹಾಕಿದ್ದಾನೆ. ಗಂಡನ ಒಪ್ಪಿಗೆಗಾಗಿ ಮೂರು ದಿನ ರಂಷಾ ಮತ್ತು ಮಕ್ಕಳು ಗಡಿಯಲ್ಲೇ ಕಾದು ಕುಳಿತಿದ್ದಾರೆ. ರಂಷಾ ಪತಿ ಪಾಕಿಸ್ತಾನ ವಿಧಾನಸಭೆಯಲ್ಲಿ ನಿರ್ದೇಶಕನಾಗಿದ್ದಾನೆ. ಸದ್ಯ ವೀಸಾ ಸಮಸ್ಯೆ ಬಗೆಹರಿಸಿಕೊಳ್ಳಲು ಹೈಕೋರ್ಟ್‌ಗೆ ರಂಷಾ ಕುಟುಂಬ ಅರ್ಜಿ ಸಲ್ಲಿಸಿದೆ.
ವೀಸಾ ಸಮಸ್ಯೆಯಿಂದ ಮೈಸೂರಿಗೆ ವಾಪಸ್ ಆದ ಮುಸ್ಲಿಂ ಮಹಿಳೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರ ಸಂಬಂಧಿ ರಿಜ್ವಾನ್ ಬಿಚ್ಚಿಟ್ಟಿದ್ದಾರೆ. ರಂಷಾ 8 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಿ ಮದುವೆಯಾಗಿದ್ರು. ರಂಷಾ ನನ್ನ ಭಾವಿ ಪತ್ನಿಯ ಅಕ್ಕ. ನನ್ನ ಮದುವೆಗಾಗಿ ಅವರು ಭಾರತಕ್ಕೆ ಬಂದಿದ್ರು. ಕಾಶ್ಮೀರ ಗಲಾಟೆಯಾದ ಹಿನ್ನೆಲೆ ತಕ್ಷಣವೇ ವಾಪಸ್ ಪಾಕಿಸ್ತಾನಕ್ಕೆ ಹೋಗಬೇಕೆಂದು ಪೊಲೀಸರು ತಿಳಿಸಿದ್ರು. ಹೀಗಾಗಿ ರಂಷಾ ಹಾಗೂ ಮಕ್ಕಳನ್ನ ಪಾಕಿಸ್ತಾನಕ್ಕೆ ಕಳುಹಿಸಲು ಭಾರತ-ಪಾಕ್ ಅಟ್ಟಾರಿಯ ಗಡಿಗೆ ನಾನು ಸಹ ಹೋಗಿದ್ದೆ. ವೀಸಾ ಎಲ್ಲವನ್ನೂ ಚೆಕ್ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಲು ಅಧಿಕಾರಿಗಳು ರೆಡಿ ಇದ್ರು. ಆದರೆ ಅವರ ಗಂಡ ಪಾಕಿಸ್ತಾನದಿಂದ ಅವರನ್ನ ಕರೆದುಕೊಂಡು ಹೋಗಲು ಬರಲಿಲ್ಲ. ರಾಯಭಾರಿಯ ಅಧಿಕಾರಿಗಳು ಕಾಲ್ ಮಾಡಿದ್ರು. ರಂಷಾ ಪತಿ ಫಾರುಕ್ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಗಡಿಯಲ್ಲಿ ಮಕ್ಕಳ ಸಂಬಂಧಿಕರು ಯಾರೂ ಬಾರದ ಕಾರಣ ಅವರನ್ನ ಒಳಗೆ ಕರೆದುಕೊಳ್ಳಲಿಲ್ಲ. ಮಕ್ಕಳು ನಿಮ್ಮ ಬಳಿಯೇ ಇರಲಿ ಎಂದು ಹೇಳಿದ್ದಾರೆ. ಅದಕ್ಕಾಗಿ ವೀಸಾ ವಿಸ್ತರಣೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದ್ದಾರೆ.
ರಂಷಾ ಅವರು ನನ್ನ ಮದುವೆಗಾಗಿ ಬಂದಿದ್ರು. ಎಲ್ಲರೂ ಬಂದ್ರೆ ಬನ್ನಿ ಬರಿ ಮಕ್ಕಳನ್ನ ಮಾತ್ರ ನಾನು ಕರೆದುಕೊಳ್ಳಲ್ಲ ಎಂದು ರಂಷಾ ಪತಿ ಹೇಳಿದ್ದಾರೆ. ಆದರೆ ರಂಷಾ ಅವರ ಬಳಿ ಭಾರತದ ಪಾಸ್‌ಪೋರ್ಟ್ ಇದೆ. ಮಕ್ಕಳು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ ಇದರಿಂದ ತೊಂದರೆಯಾಗುತ್ತಿದೆ. ರಂಷಾಗೆ ಪಾಕಿಸ್ತಾನದ ಪೌರತ್ವ ಸಿಕ್ಕಿಲ್ಲ. ಭಾರತದ ಪಾಸ್‌ಪೋರ್ಟ್ ಅವಧಿ ಮುಕ್ತಾಯವಾಗಿದೆ. ಈಗಾಗಿ ರಿನಿವಲ್‌ಗಾಗಿ ರಂಷಾ ತತ್ಕಾಲ್‌ನಲ್ಲಿ ಅಪ್ಲೈ ಮಾಡಿದ್ದಾರೆ. ಇಂದು ಪಾಸ್‌ಪೋರ್ಟ್ ಸಿಗುವ ವಿಶ್ವಾಸ ಇದೆ. ಅಧಿಕಾರಿಗಳು ಸಹ ನಮಗೆ ಸಹಕಾರ ಕೊಡುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ರಂಷಾ ತಂಗಿಯ ಜೊತೆ ನನಗೆ ನಿಶ್ಚಿತಾರ್ಥ ಆಗಿತ್ತು. ರಂಷಾ ಅವರು ಪಾಕಿಸ್ತಾನದಿಂದ ಬರುವಿಕೆಗಾಗಿ ನಾವು ಒಂದೂವರೆ ವರ್ಷ ಕಾದಿದ್ದೇವೆ. ಈಗ ಅವರು ಮತ್ತು ಮಕ್ಕಳು ಬಂದಿದ್ದಾರೆ. ಇದೇ ತಿಂಗಳ 11ರಂದು ನನ್ನ ಮದುವೆ ಇದೆ. ಆದರೆ ಅವರಿಗೆ ನನ್ನ ಮದುವೆಗೆ ಇರಲು ಆಗುತ್ತಿಲ್ಲ. ಇದು ಬೇಸರದ ಸಂಗತಿ. ನಾಲ್ಕು ದಿನದಿಂದ ಅಮೃತಸರ, ಪಂಜಾಬ್, ದೆಹಲಿ ಎಲ್ಲಾ ಕಡೆ ಸುತ್ತಾಡುತ್ತಿದ್ದೇನೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮದುವೆ ಲಗ್ನ ಪತ್ರಿಕೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ರಂಷಾ ಅವರ ತಂದೆ ಮೂಲ ಪಾಕಿಸ್ತಾನದವರು. ಇಂಡಿಯಾ ಪಾಕಿಸ್ತಾನ ಬೇರೆಯಾದಾಗ ಸ್ವಲ್ಪ ಜನ ಪಾಕಿಸ್ತಾನದಲ್ಲಿ, ಸ್ವಲ್ಪ ಜನ ಭಾರತದಲ್ಲಿ ಉಳಿದುಕೊಂಡರು. ಅಂದಿನಿಂದಲೂ ಕೂಡ ಇಬ್ಬರ ನಡುವೆ ಸಂಬಂಧ ಹಾಗೇ ಇದೆ. ಆ ಪ್ರೀತಿಯಿಂದಲೇ ಅವರಿಬ್ಬರಿಗೂ ಮದುವೆ ಗೊತ್ತುಮಾಡಿ ಅರೆಂಜ್ ಮ್ಯಾರೇಜ್ ಮಾಡಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮದುವೆಗಿಂತ ಮಕ್ಕಳ ಭವಿಷ್ಯ ಬಹಳ ಮುಖ್ಯ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಬೇಕು. ಗಡಿಯಲ್ಲಿ ಪಾಕಿಸ್ತಾನದಿಂದ ಬಂದವರನ್ನ ಭಾರತದವರು ಸಮಯಕ್ಕೆ ಸರಿಯಾಗಿ ಬಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ಭಾರತದಿಂದ ಪಾಕಿಸ್ತಾನಕ್ಕೆ ಹೋಗುವವರನ್ನ ಕರೆದುಕೊಳ್ಳಲು ಯಾರು ಸಹ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಹೇಳಿದ್ದಾರೆ.