ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ (Pahalgam) ಹಿಂದೂಗಳ ನರಮೇಧ ಈಗ ಉಭಯ ರಾಷ್ಟ್ರಗಳ ನಡುವೆ ಯುದ್ಧದ ಭೀತಿ ತಂದೊಡ್ಡಿದೆ. ಆದ್ರೆ ಈವರೆಗೂ ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಳ್ಳದ ಪಾಕ್ 6 ವರ್ಷಗಳ ಬಳಿಕ ಪರೋಕ್ಷವಾಗಿ ಪುಲ್ವಾಮಾ ದಾಳಿಯ (Pulwama Terror Attack) ಹೊಣೆ ಹೊತ್ತುಕೊಂಡಿದೆ. ಪಾಕಿಸ್ತಾನದ ಸೇನಾಧಿಕಾರಿಯೊಬ್ಬರು ನೀಡಿದ ಹೇಳಿಕೆ ಇದಕ್ಕೆ ಪುಷ್ಠಿ ನೀಡಿದೆ.
ಹೌದು. ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು (Pakistan Army Official) ನಡೆಸಿದ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಮಾತನಾಡಿ, ಪುಲ್ವಾಮಾ ಭಯೋತ್ಪಾದಕ ದಾಳಿಯು ಪಾಕಿಸ್ತಾನಿ ಮಿಲಿಟರಿಯ ʻಯುದ್ಧತಂತ್ರದ ಭಾಗʼ ಎಂದು ಹೇಳಿದ್ದಾರೆ. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವನ್ನು ಬಹಿರಂಗವಾಗಿ ಪಾಕ್ ಒಪ್ಪಿಕೊಂಡಿದೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್ ಪ್ರಧಾನಿ
ಮುಂದುವರಿದು…. ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶಗಳು ಅಥವಾ ಇಲ್ಲಿನ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಅದನ್ನು ಗಮನಿಸದೆ ಬಿಡಲೂ ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರಕ್ಕೆ ಋಣಿಯಾಗಿದ್ದೇವೆ. ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನ ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ. ಪುಲ್ವಾಮಾದಲ್ಲಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಈಗಲೂ ನಮ್ಮ ಕಾರ್ಯಾಚರಣೆ ಮತ್ತು ಕಾರ್ಯತಂತ್ರವನ್ನು ಪ್ರದರ್ಶಿಸಿದ್ದೇವೆ. ಇದನ್ನ ಅವರು ಕೂಡ ಗಮನಿಸಿರುತ್ತಾರೆ ಅಂತ ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್ ಘೋಷಣೆ
ಏನಿದು ಪುಲ್ವಾಮಾ ಘಟನೆ?
2019ರ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್ ಟಾಪ್ ಕಮಾಂಡರ್ಸ್
2019ರ ದಾಳಿ ನಂತರ ಏನೇನಾಯ್ತು?
* ಫೆಬ್ರವರಿ 14: ಜೈಶ್ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ.
* ಫೆಬ್ರವರಿ 15: ಪಾಕಿಸ್ತಾನಕ್ಕೆ ನೀಡಿದ್ದ ಅತ್ಯಂತ ಆಪ್ತ ರಾಷ್ಟ್ರದ ಸ್ಥಾನಮಾನವನ್ನು ಭಾರತ ಹಿಂತೆಗೆದುಕೊಂಡಿತು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದನ್ನು ಪ್ರತ್ಯೇಕಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಪಾಕ್ ತಿರಸ್ಕರಿಸಿತು.
* ಫೆಬ್ರವರಿ 16: 40 ಸಿಆರ್‌ಪಿಎಫ್ ಸೈನಿಕರ ಪಾರ್ಥಿವ ಶರೀರಗಳನ್ನು ಅವರ ತವರುಗಳಲ್ಲಿ ಭಾರೀ ಜನಸ್ತೋಮದ ನಡುವೆ ಅಂತ್ಯಕ್ರಿಯೆ ಮಾಡಲಾಯಿತು.
* ಫೆಬ್ರವರಿ 17: ಕಣಿವೆಯ ಐದು ಪ್ರತ್ಯೇಕತಾವಾದಿ ನಾಯಕರಿಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಂಡಿತು. ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ವಿವಿಧ ದೇಶಗಳಿಗೆ ಮಾಹಿತಿ ನೀಡಿತು.
* ಫೆಬ್ರವರಿ 18: ಪುಲ್ವಾಮಾದ ಪಿಂಗ್ಲೆನಾ ಪ್ರದೇಶದಲ್ಲಿ ಸುಮಾರು 18 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಮೇಜರ್ ಮತ್ತು ಮೂವರು ಜೈಶ್ ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು. ಪಾಕಿಸ್ತಾನವು ಭಾರತಕ್ಕೆ ತನ್ನ ರಾಯಭಾರಿಯನ್ನು ಸಮಾಲೋಚನೆಗಾಗಿ ಕರೆಸಿತು.
* ಫೆಬ್ರವರಿ 19: ನಂತರ ಪ್ರಧಾನಿ ಇಮ್ರಾನ್ ಖಾನ್ ಮೌನ ಮುರಿದರು. ಭಾರತ ಅವರ ವಿರುದ್ಧ ದಂಡನಾತ್ಮಕ ಮಿಲಿಟರಿ ಕ್ರಮ ಕೈಗೊಂಡರೆ ಪಾಕ್ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳಿದರು.
* ಫೆಬ್ರವರಿ 20: ಭಯೋತ್ಪಾದಕ ದಾಳಿ ತನಿಖೆಗಳು ಎನ್‌ಐಎಗೆ ವಹಿಸಲಾಯಿತು. ಎಫ್‌ಐಆರ್‌ನಲ್ಲಿ ಜೈಶ್ ಹೆಸರು ಸೇರಿಸಲಾಗಿದೆ.
* ಫೆಬ್ರವರಿ 22: ಜೈಶ್ ಕೇಂದ್ರ ಕಚೇರಿಯ ಆಡಳಿತಾತ್ಮಕ ನಿಯಂತ್ರಣವನ್ನು ಪಾಕ್ ಸರ್ಕಾರ ವಹಿಸಿಕೊಂಡಿದೆ.
* ಫೆಬ್ರವರಿ 23: ದಂಗೆ ನಿಗ್ರಹ ಕಾರ್ಯಾಚರಣೆಗಳನ್ನು ಬಲಪಡಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕಾಶ್ಮೀರ ಕಣಿವೆಗೆ 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಳುಹಿಸಲಾಗಿದೆ.
* ಫೆಬ್ರವರಿ 26: ಪಾಕ್‌ನ ಬಾಲಕೋಟ್‌ನಲ್ಲಿರುವ ಜೈಶ್‌ನ ಅತಿದೊಡ್ಡ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಐಎಎಫ್ ಬಾಂಬ್ ದಾಳಿ.
* ಫೆಬ್ರವರಿ 27: ಗಡಿಯ ಇನ್ನೊಂದು ಬದಿಯಲ್ಲಿ ಮಿಗ್ ಪತನಗೊಂಡ ನಂತರ ಐಎಎಫ್ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ಸೆರೆಹಿಡಿಯಿತು.
* ಫೆಬ್ರವರಿ 28: ಉಭಯ ದೇಶಗಳ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ಸೇವೆಯನ್ನು ಪಾಕ್ ಸ್ಥಗಿತಗೊಳಿಸಿದೆ. ಜೈಶ್ ನಾಯಕ ಮಸೂದ್ ಅಜರ್‌ಗೆ ಪ್ರಯಾಣ ನಿಷೇಧ ಹೇರುವಂತೆ ಒತ್ತಾಯಿಸಿ ಅಮೆರಿಕ, ಯುಕೆ, ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವಿನಂತಿ.
* ಮಾರ್ಚ್ 1: ಅಂತರರಾಷ್ಟ್ರೀಯ ಮಟ್ಟದ ಒತ್ತಡದ ನಂತರ ಪಾಕ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ.