ಇಸ್ಲಾಮಾಬಾದ್: ಆರ್ಥಿಕತೆ ದಿವಾಳಿಯಿಂದ ಪಾಕಿಸ್ತಾನ ನರಳುತ್ತಿರುವ ಸಂದರ್ಭದಲ್ಲೇ ಪ್ರಯಾಣಿಕರಿಲ್ಲದೆ ವಿಮಾನವನ್ನು ಹಾರಿಸುವ ಪರಿಸ್ಥಿತಿ ಪಾಕ್‍ಗೆ ಬಂದಿದೆ.
ಪಾಕಿಸ್ತಾನ ವಿಮಾನಯಾನ ಸಂಸ್ಥೆಯ ಕುರಿತು ಅಚ್ಚರಿಯ ವರದಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ(ಪಿಐಎ) ನಿರ್ವಹಿಸುವ 46 ವಿಮಾನಗಳು 2016-17ರಲ್ಲಿ ಯಾವುದೇ ಪ್ರಯಾಣಿಕರಿಲ್ಲದೆ ಹಾರಾಟ ನಡೆಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಮಾಧ್ಯಮದ ವರದಿ ಪ್ರಕಾರ, ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ಈ ವಿಮಾನಗಳು ಹಾರಾಟ ನಡೆಸಿದ್ದು, ಯಾವುದೇ ಪ್ರಯಾಣಿಕರಿಲ್ಲದೆ 46 ವಿಮಾನಗಳನ್ನು ಸಂಸ್ಥೆ ನಿರ್ವಹಿಸಿದೆ. ಈ ಮೂಲಕ ವಿಮಾನಯಾನ ಸಂಸ್ಥೆ 180 ಮಿಲಿಯನ್ ಪಾಕಿಸ್ತಾನ ರೂಪಾಯಿಯಷ್ಟು ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರೂ ಯಾವುದೇ ವಿಚಾರಣೆಯನ್ನು ಪ್ರಾರಂಭಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಈ 46 ವಿಮಾನಗಳು ಮಾತ್ರವಲ್ಲದೆ, 36 ಹಜ್ ಯಾತ್ರಾ ವಿಮಾನಗಳು ಸಹ ಯಾವುದೇ ಪ್ರಯಾಣಿಕರಿಲ್ಲದೆ ಕಾರ್ಯನಿರ್ವಹಿಸಿವೆ ಎಂದು ವರದಿ ಬಹಿರಂಗಪಡಿಸಿದೆ.
Advertisement
ಪಾಕಿಸ್ತಾನದ ಆರ್ಥಿಕತೆಯು ಅಲ್ಲೋಲ ಕಲ್ಲೋಲವಾಗಿರುವ ಸಂದರ್ಭದಲ್ಲೇ ಈ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಪ್ಯಾರಿಸ್‍ನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್)ನಿಂದ ಕಪ್ಪುಪಟ್ಟಿಗೆ ಸೇರಿಸುವ ಬೆದರಿಕೆಯನ್ನು ಸಹ ಪಾಕಿಸ್ತಾನ ಎದುರಿಸುತ್ತಿದೆ.
ಸಾಲದ ಹೊರೆಯಿಂದ ಪಾಕ್ ಆರ್ಥಿಕತೆ ಕುಸಿದು ಹೋಗಿದ್ದು, ಇದೆಲ್ಲದರಿಂದ ಹೈರಾಣಾಗಿರುವ ಪಾಕಿಸ್ತಾನವು ಸಮಸ್ಯೆಯಿಂದ ಪಾರಾಗಲು ಬೇಲ್ ಔಟ್ಸ್(ಐಎಂಎಫ್ ಸೇರಿದಂತೆ) ಪಡೆದುಕೊಂಡಿದೆ. ಅಲ್ಲದೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದು ಸೇರಿದಂತೆ ಇತರೆ ಅಕ್ರಮಗಳಿಗೆ ಕಡಿವಾಣ ಹಾಕದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಪಾಕ್‍ಗೆ ಎಫ್‍ಎಟಿಎಫ್ ಎಚ್ಚರಿಕೆ ನೀಡಿದೆ.
ಆದಾಯ ಗಳಿಕೆ ದೃಷ್ಟಿಯಿಂದ ಪಾಕಿಸ್ತಾನ ಇತ್ತೀಚೆಗೆ ಸರ್ಕಾರಿ ಬಂಗಲೆಯನ್ನು ಸಹ ಬಾಡಿಗೆಗೆ ನೀಡುವುದಾಗಿ ಘೋಷಿಸಿತ್ತು. ಅಲ್ಲದೆ, ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಚಹಾ ಬಿಸ್ಕತ್ ನೀಡುವುದನ್ನು ನಿಲ್ಲಿಸುವ ಕುರಿತು ಸಹ ನಿರ್ಧಾರವನ್ನು ಕೈಗೊಂಡಿತ್ತು.