ಇಸ್ಲಾಮಾಬಾದ್: ಉತ್ತರ ಪಾಕಿಸ್ತಾನದಲ್ಲಿ ಸೇನೆಯು ತಾಲಿಬಾನ್ ವಿರುದ್ಧ ನಡೆಸಿದ ಡ್ರೋನ್ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮೂರು ದಾಳಿಗಳು ನಡೆದಿದ್ದು, ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನಿ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮರ್ದಾನ್ ಜಿಲ್ಲೆಯ ಕಟ್ಲಾಂಗ್ ಪರ್ವತ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಮುಹಮ್ಮದ್ ಅಲಿ ಸೈಫ್ ತಿಳಿಸಿದ್ದಾರೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಪಾಕಿಸ್ತಾನಿ ತಾಲಿಬಾನ್, ಭದ್ರತಾ ಪಡೆಗಳ ವಿರುದ್ಧ ಸಮರ ಸಾರಿತ್ತು. ಹೊಂಚುದಾಳಿಗಳು, ಗುರಿಯಿಟ್ಟು ದಾಳಿಗಳು, ಆತ್ಮಹತ್ಯಾ ದಾಳಿಗಳನ್ನು ನಡೆಸಿತ್ತು. ಖೈಬರ್ ಪಖ್ತುಂಖ್ವಾದಲ್ಲಿ ಸುಮಾರು 100 ದಾಳಿಗಳ ಹೊಣೆಯನ್ನು ಟಿಟಿಪಿ ಹೊತ್ತುಕೊಂಡಿದೆ.
ಅದೇ ಪ್ರಾಂತ್ಯದಲ್ಲಿ, ಮನೆಯೊಂದರಲ್ಲಿ ಅಡಗಿಕೊಂಡಿದ್ದ ಸಶಸ್ತ್ರ ತಾಲಿಬಾನ್ ಹೋರಾಟಗಾರರು ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಏಳು ಸೈನಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.