ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ

Public TV
1 Min Read
Pakistan Flag Removed From Desk Where 1972 Simla Agreement Was Signed

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯ (Pahalgam Terror Attack) ಬಳಿಕ ಪಾಕ್‌ (Pakistan) ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಭಾರತ, ಈಗ ಶಿಮ್ಲಾದ ರಾಜಭವನದ ಕೀರ್ತಿ ಹಾಲ್‌ನಲ್ಲಿದ್ದ 1972ರ ಶಿಮ್ಲಾ ಒಪ್ಪಂದಕ್ಕೆ (Simla Agreement) ಸಹಿ ಹಾಕಿದ್ದ ಮೇಜಿಂದ ಪಾಕ್‌ ಧ್ವಜವನ್ನು ತೆಗೆದು ಹಾಕಿದೆ.

Pakistan Flag Removed From Desk Where 1972 Simla Agreement Was Signed 1

ಒಪ್ಪಂದಕ್ಕೆ ಸಹಿ ಹಾಕಿದ ಮರದ ಮೇಜನ್ನು ಶಿಮ್ಲಾದ ರಾಜಭವನದ ಕೀರ್ತಿ ಹಾಲ್‌ನಲ್ಲಿ ಇರಿಸಲಾಗಿದೆ. ಇದರ ಮೇಲೆ ಶಿಮ್ಲಾ ಒಪ್ಪಂದಕ್ಕೆ ಇಲ್ಲಿ 3-7-1972 ರಂದು ಸಹಿ ಹಾಕಲಾಯಿತು ಎಂದು ಬರೆಯಲಾದ ಫಲಕವನ್ನು ಇರಿಸಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಭುಟ್ಟೊ ಈ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಛಾಯಾಚಿತ್ರವನ್ನು ಮೇಜಿನ ಒಂದು ಬದಿಯಲ್ಲಿ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಧ್ವಜಗಳನ್ನು ಮೇಜಿನ ಮೇಲೆ ಇರಿಸಲಾಗಿತ್ತು, ಈಗ ಭಾರತೀಯ ಧ್ವಜವನ್ನು ಮಾತ್ರ ಇರಿಸಲಾಗಿದೆ.

ಶಿಮ್ಲಾ ಒಪ್ಪಂದ ಎಂದರೇನು?
1971ರಲ್ಲಿ ಎರಡು ವಾರಗಳ ಕಾಲ ನಡೆದ ನಿರ್ಣಾಯಕ ಯುದ್ಧಗಳ ನಂತರ ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) 90,000 ಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರು ಭಾರತಕ್ಕೆ ಶರಣಾಗಿದ್ದರು. ಇದು ಕದನ ವಿರಾಮಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಯುದ್ಧ ಕೊನೆಗೊಂಡು ಭಾರತದ ಜಯ ಸಾಧಿಸಿ, ಬಾಂಗ್ಲಾದೇಶದ ಜನನವಾಯಿತು. ಬಳಿಕ ಶಾಂತಿ ಸ್ಥಾಪನೆಗಾಗಿ ಸಿಮ್ಲಾ ಒಪ್ಪಂದವನ್ನು ಜುಲೈ 3, 1972 ರಲ್ಲಿ ಮಾಡಿಕೊಳ್ಳಲಾಗಿತ್ತು.

ಏ.22ರಂದು ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ಈ ದಾಳಿಯಿಂದ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ಕೈಗೊಂಡಿದೆ.

Share This Article