ಪಬ್‌ಜಿ ವ್ಯಸನ – ತಾಯಿ, ಒಡಹುಟ್ಟಿದವರನ್ನೇ ಗುಂಡಿಕ್ಕಿ ಕೊಂದ ಬಾಲಕ!

Public TV
1 Min Read
pubg

ಲಾಹೋರ್: ಪಬ್‌ಜಿ ವ್ಯಸನಿಯಾಗಿದ್ದ 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬದವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ನಹಿದ್‌ ಮುಬಾರಕ್‌ (45) ಹಾಗೂ ಆಕೆಯ ಮಗ ತೈಮುರ್‌, ಇಬ್ಬರು ಹೆಣ್ಣುಮಕ್ಕಳು ಗುಂಡೇಟಿಗೆ ಬಲಿಯಾಗಿದ್ದಾರೆ. ಪಬ್‌ಜಿ ವ್ಯಸನದಿಂದಾಗಿ ತನ್ನ ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ ಈಗ ಪೊಲೀಸರ ವಶದಲ್ಲಿದ್ದಾನೆ. ಇದನ್ನೂ ಓದಿ: ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

Crime Scene

ಪಬ್‌ಜಿ ವ್ಯಸನಿಯಾಗಿದ್ದ ಹುಡುಗ ತನ್ನ ಆಟದ ಪ್ರಭಾವದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕೊಂದಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್‌ ಆಟದಲ್ಲೇ ಕಳೆಯುತ್ತಿದ್ದ ಬಾಲಕ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಹಿದ್‌ ವಿಚ್ಛೇದಿತೆಯಾಗಿದ್ದು, ಮಗ ಓದಿನ ಕಡೆ ಗಮನಹರಿಸದೇ ಇರುವುದು ಮತ್ತು ಪಬ್‌ಜಿ ಆಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಬಗ್ಗೆ ಆತನನ್ನು ಸದಾ ಬೈಯುತ್ತಿದ್ದರು. ಘಟನೆ ದಿನ ತಾಯಿ, ಮಗನನ್ನು ಗದರಿಸಿದ್ದಾರೆ. ನಂತರ ಬಾಲಕ ತನ್ನ ತಾಯಿಯ ಪಿಸ್ತೂಲ್‌ ಅನ್ನು ಕಬೋರ್ಡ್‌ನಿಂದ ಹೊರತೆಗೆದುಕೊಂಡಿದ್ದಾನೆ. ತಾಯಿ ಮತ್ತು ಸಹೋದರ, ಸಹೋದರಿಯರು ನಿದ್ರೆಯಲ್ಲಿದ್ದ ವೇಳೆ ಪಿಸ್ತೂಲ್‌ನಿಂದ ಗುಂಡಿ ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 500 ರೂಪಾಯಿಗೆ ಖರೀದಿಸಿದ್ದ ಕುರ್ಚಿ 16 ಲಕ್ಷಕ್ಕೆ ಹರಾಜು

mdk students pubg

ಮಾರನೇ ದಿನ ನೆರೆಹೊರೆಯವರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಆರಂಭದಲ್ಲಿ ತನಗೆ ಈ ಘಟನೆ ಬಗ್ಗೆ ಗೊತ್ತಿಲ್ಲ ಎನ್ನುತ್ತಿದ್ದ ಬಾಲಕ ನಂತರ ತಪ್ಪೊಪ್ಪಿಕೊಂಡಿದ್ದಾನೆ. ಹತ್ಯೆ ಮಾಡಿ ಚರಂಡಿಗೆ ಬಿಸಾಡಿದ್ದ ಪಿಸ್ತೂಲ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *