ಬೆಂಗಳೂರು: ನಾಳೆ ಅಂದರೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿಯೇ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯೋದಾಗಿ ಘೋಷಿಸಲಾಗಿತ್ತು. ಇದಕ್ಕಾಗಿ ಭರ್ಜರಿ ತಯಾರಿ ಕೂಡಾ ನಡೆದಿತ್ತು. ಕಿಚ್ಚ ಸುದೀಪ್ ಅಭಿಮಾನಿಗಳು ಕೂಡಾ ಚಿತ್ರದುರ್ಗದತ್ತ ಹೊರಡಲನುವಾಗಿದ್ದರು. ಆದರೆ ನಾಳೆ ನಡೆಯ ಬೇಕಿದ್ದ ಈ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದುಗೊಂಡಿದೆ. ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪೈಲ್ವಾನ್ ನಿರ್ದೇಶಕ ಕೃಷ್ಣ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಎಲ್ಲ ತಯಾರಿಯೂ ನಡೆದಿದ್ದರೂ ಕಡೇ ಕ್ಷಣದಲ್ಲಿ ಇಂಥಾ ನಿರ್ಧಾರ ಕೈಗೊಳ್ಳಲು ಕಾರಣವೇನೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಕೊಳ್ಳೋದು ಸಹಜ. ಈ ಬಗ್ಗೆ ನಿರ್ದೇಶಕ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮೇಘಸ್ಫೋಟ ಸಂಭವಿಸಿ ಉಕ್ಕಿ ಹರಿಯುತ್ತಿರೋ ಕೃಷ್ಣೆ ಉತ್ತರ ಕರ್ನಾಟಕ ಜಿಲ್ಲೆಯನ್ನೇ ಮುಳುಗಿಸಿ ಬಿಟ್ಟಿದೆ. ಅಲ್ಲಿನ ಜನ ಅಕ್ಷರಶಃ ಬದುಕು ಕಳೆದುಕೊಂಡಿದ್ದಾರೆ. ನಮ್ಮ ಜನ ಅಷ್ಟೊಂದು ತಲ್ಲಣಿಸುತ್ತಿರುವಾಗ, ಅಲ್ಲಿ ಜೀವ ಹಾನಿ ಸಂಭವಿಸುತ್ತಿರುವಾಗ ಇಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸೋದು ಸರಿಯಲ್ಲ ಎಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಅಂತ ನಿರ್ದೇಶಕ ಕೃಷ್ಣ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳ್ಯಾರೂ ಬೇಸರಿಸಿಕೊಳ್ಳಲಾರರೆಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾಳೆ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ನಡೆಯಲಿತ್ತು. ಆದರೆ ಕಿಚ್ಚ ಸುದೀಪ್ ಅವರೇ ಉತ್ತರ ಕರ್ನಾಟಕಕ್ಕೆ ಬಂದೊದಗಿದ ಸ್ಥಿತಿ ಕಂಡು ಮರುಗಿದ್ದಾರೆ. ವೀಡಿಯೋ ಮೂಲಕ ಸಂದೇಶ ರವಾನಿಸಿ ತಮ್ಮ ಅಭಿಮಾನಿಗಳೆಲ್ಲರೂ ಸಂತ್ರಸ್ತ ಜನರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಳೆ ದಿನೇ ದಿನೇ ಹೆಚ್ಚುತ್ತಿರೋದರಿಂದ ಉತ್ತರ ಕರ್ನಾಟಕ ಸಂಪೂರ್ಣ ಮುಳುಗಡೆಯಾಗೋ ಸ್ಥಿತಿ ಬಂದೊದಗಿದೆ. ಇಂಥಾ ಸಂದರ್ಭದಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸೋದರಲ್ಲಿ ಅರ್ಥವಿಲ್ಲ ಅನ್ನೋದು ನಿರ್ದೇಶಕ ಕೃಷ್ಣ ಅವರ ಅಭಿಪ್ರಾಯ. ಇದಕ್ಕೆ ಈಗಾಗಲೇ ಉತ್ತರ ಕರ್ನಾಟಕ ಮಂದಿಯತ್ತ ನೆರವಿನ ಹಸ್ತ ಚಾಚುತ್ತಿರುವ ಕಿಚ್ಚನ ಅಭಿಮಾನಿಗಳು ಖಂಡಿತಾ ಸಮ್ಮತಿಸುತ್ತಾರೆಂಬುದರಲ್ಲಿ ಸಂಶಯವೇನಿಲ್ಲ.