ಬೆಂಗಳೂರು: ಕಾಶ್ಮೀರದಲ್ಲಿ (Jammu And Kashmir) ಮಂಗಳವಾರ ನಡೆದ ಭೀಕರ ಉಗ್ರರ ಅಟ್ಟಹಾಸಕ್ಕೆ ಬೆಂಗಳೂರು (Bengaluru) ಮೂಲದ ಟೆಕ್ಕಿ (Techie) ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದಾರೆ.
ಕಾಶ್ಮೀರದ ಆನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ (Pahalgam Terrorist Attack) ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ಬೆಂಗಳೂರು ಮೂಲದ ಟೆಕ್ಕಿ ಭರತ್ ಭೂಷಣ್ ಕೂಡ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ, ಉಗ್ರರ ಅಟ್ಟಹಾಸಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಿಂದ ವೆಕೆಷನ್‌ಗಾಗಿ ಭರತ್ ಭೂಷಣ್, ಪತ್ನಿ, ಹಾಗೂ ಮೂರು ವರ್ಷದ ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ನಾಲ್ಕೈದು ದಿನಕ್ಕೆ ಪ್ರವಾಸಕ್ಕೆ ತೆರಳಿದ್ದ ಕುಟುಂಬ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಿಂದ ಭರತ್ ಭೂಷಣ್ ಪ್ರಾಣಪಕ್ಷಿ ಹಾರಿಹೋಗಿದೆ. ಇದನ್ನೂ ಓದಿ: Pahalgam Terror Attack | ಉಗ್ರರ ದಾಳಿಗೆ ಬೆಂಗಳೂರಿನ ಮಧುಸೂದನ್ ಬಲಿ
ಪಹಲ್ಗಾಮ್‌ನಲ್ಲಿ ಪ್ರವಾಸದಲ್ಲಿದ್ದ ವೇಳೆ ಮಂಗಳವಾರ ಮಧ್ಯಾಹ್ನ ಏಕಾಏಕಿ ಉಗ್ರರ ದಾಳಿ ನಡೆದಿದೆ. ಈ ವೇಳೆ ದಾಳಿಯಾದ ಸ್ಥಳದಲ್ಲೇ ಇದ್ದ ಭೂಷಣ್ ಕುಟುಂಬ, ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮರವೊಂದರ ಬಳಿ ಮಗು ಜೊತೆ ಅವಿತುಕುಳಿತಿದ್ದ ಭರತ್ ಭೂಷಣ್‌ಗೆ ಉಗ್ರರು ನೇರ ಶೂಟ್ ಮಾಡಿದ್ದಾರೆ. ಬುಲೆಟ್ ನೇರ ಭೂಷಣ್ ತಲೆಗೆ ಬಿದ್ದಿದ್ದು, ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಭೂಷಣ್ ಪರಿಶೀಲಿಸಿದ ಪತ್ನಿ, ಭೂಷಣ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ
ಭರತ್ ಕಳೆದ ಎಂಟು ವರ್ಷದ ಹಿಂದೆ ಮತ್ತಿಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದರು. ಟೆಕ್ಕಿಯಾಗಿದ್ದ ಭರತ್ ಇತ್ತೀಚಿಗೆ ಕೆಲಸ ಬಿಟ್ಟು ಬಿಸಿನೆಸ್ ಆರಂಭಿಸುವ ಚಿಂತನೆಯಲ್ಲಿದ್ದರು. ಅದರಂತೆ ಕೆಲಸ ಬಿಟ್ಟಿದ್ದ ಕಾರಣ ರಜೆಯಿದ್ದಿದ್ದರಿಂದ ಮಗುವಿಗೆ ಕಾಶ್ಮೀರ ತೋರಿಸಬೇಕೆಂಬ ಕಾರಣಕ್ಕೆ ಪ್ರವಾಸ ಕೈಗೊಂಡಿದ್ದರು. ಆದರೆ ದುರಾದೃಷ್ಟವಶಾತ್ ಉಗ್ರರ ಬಂದೂಕಿನ ಗುಂಡೇಟಿಗೆ ಭರತ್ ಉಸಿರು ಚೆಲ್ಲಿದ್ದಾರೆ. ಇದನ್ನೂ ಓದಿ: ಕಲಿಮಾ ಹೇಳದ್ದಕ್ಕೆ ತಂದೆಯ ತಲೆಗೆ ಗುಂಡೇಟು – ಕಣ್ಣೀರಿಟ್ಟ ಪುತ್ರಿ