ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇಂದು ಉನ್ನತಮಟ್ಟದ ಸಂಪುಟ ಸಮಿತಿ ಸಭೆ ನಡೆಸಿದ ಕೇಂದ್ರ ಸರ್ಕಾರ ಗುರುವಾರ (ಏ.24) ಸರ್ವಪಕ್ಷಗಳ ಸಭೆ ಕರೆದಿದೆ.
ಗುರುವಾರ (ಏ.24) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರೂ ಉಪಸ್ಥಿತರಿರಲಿದ್ದಾರೆ. ಪಹಲ್ಗಾಮ್ ದಾಳಿಯ ಕುರಿತು ಸರ್ವಪಕ್ಷ ಸಭೆಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ಇಂದಿನ ಸಭೆಯಲ್ಲಿ ಪಾಕ್ ಉಗ್ರರನ್ನು ಮಟ್ಟಹಾಕಲು, ಪಾಕ್ ಸಂಬಂಧ ಕಡಿದುಕೊಳ್ಳುವ ಬಗ್ಗೆ ತೆಗೆದುಕೊಂಡ ನಿರ್ಧಾರಗಳನ್ನು ವಿವರಿಸಲಿದ್ದಾರೆ.
ಇಂದಿನ ಸಭೆಯಲ್ಲಿ ಆಗಿದ್ದೇನು?
ಕೇಂದ್ರ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್ ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧು ನದಿ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ತೆಗೆದುಕೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ತಿಳಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ಸತತ ಮೂರು ಗಂಟೆಗಳ ಕಾಲ ನಡೆದ ಹೈವೋಲ್ಟೇಜ್ ಸಭೆಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದು, ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ತೀರ್ಮಾನ ಮಾಡಲಾಗಿದೆ.
ಪ್ರಮುಖ ನಿರ್ಣಯಗಳು
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 1960ರ ಸೆಪ್ಟೆಂಬರ್ 19ರಂದು ಸಹಿ ಹಾಕಲಾಗಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿದಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಅಟ್ಟಾರಿ-ವಾಘಾ ಗಡಿ ಮುಚ್ಚಲು ಭಾರತ ತೀರ್ಮಾನಿಸಿದೆ.
ಅಷ್ಟೇ ಅಲ್ಲದೇ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ನೀಡಿದ ಅನುಮತಿಯನ್ನು ತಡೆಹಿಡಿಯಲಾಗುತ್ತಿದೆ. ಈ ಹಿಂದೆ ನೀಡಿದ್ದ ಯಾವುದೇ SVES ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತದೆ. ಈ ವೀಸಾ ಅಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆ 48 ಗಂಟೆಯೊಳಗೆ ಭಾರತ ತೊರೆಯಬೇಕೆಂದು ಹೇಳಿದೆ.
ಜೊತೆಗೆ ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್, ರಕ್ಷಣಾ/ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಹಂತಹಂತವಾಗಿ ಭಾರತದಿಂದ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.