ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಭಯೋತ್ಪಾದಕ ದಾಳಿಯಿಂದಾಗಿ ವಿಮಾನಗಳ ದರಗಳನ್ನು ನಿಯಮಿತ ಮಟ್ಟದಲ್ಲಿ ಹಾಗೂ ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದ ಬೆನ್ನಲ್ಲೇ 65,000ಕ್ಕೆ ಏರಿಸಿದ್ದ ವಿಮಾನಗಳ ಟಿಕೆಟ್ ದರಗಳಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ.
ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪ್ರವಾಸಿಗರು ಕಾಶ್ಮೀರ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಸುಮಾರು 15 ಸಾವಿರ ಜನರು ಟಿಕೆಟ್ ಕ್ಯಾನ್ಸಲ್ ಮಾಡಿದ್ದು, ರೀಶೆಡ್ಯೂಲ್‌ಗೆ ಮನವಿ ಮಾಡಿದ್ದಾರೆ. ಅಲ್ಲದೇ, ಇದೀಗ ಶ್ರೀನಗರದಿಂದ ಹೊರಡುವ ವಿಮಾನಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಹೀಗಾಗಿ, ವಿಮಾನ ದರದಲ್ಲಿ ಏರಿಕೆ ಮಾಡದಂತೆ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್ ಪ್ರಜೆಗಳಿಗೆ ಭಾರತ ವಾರ್ನಿಂಗ್ – ಪಾಕ್ ಸಂಬಂಧಕ್ಕೆ ಎಳ್ಳುನೀರು
ದಾಳಿಯಿಂದಾಗಿ ಕಾಶ್ಮೀರ, ಪಹಲ್ಗಾಮ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿದ್ದ ಪ್ರವಾಸಿಗರು ತಮ್ಮ ಸ್ವಸ್ಥಾನಗಳಿಗೆ ಮರಳುತ್ತಿದ್ದು, ಹೀಗಾಗಿ ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.
ಟಿಕೆಟ್ ದರ 14,000 ರೂ.ಗೆ ಇಳಿಕೆ:
ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆಯ ನಂತರ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು 14,000 ರೂ.ಗೆ ಇಳಿಸಿದೆ. ಸದ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೋ ಕಾರ್ಯನಿರ್ವಹಿಸುತ್ತಿದೆ. ಆದರೆ ದಾಳಿಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಬಗ್ಗೆ ತಿಳಿದ ವಿಮಾನಯಾನ ಸಂಸ್ಥೆಗಳು ದರವನ್ನು ಹೆಚ್ಚಿಸಿದ್ದವು. ಶ್ರೀನಗರದಿಂದ ದೆಹಲಿಗೆ ಒಂದು ಮಾರ್ಗದ ದರ 65,000 ರೂ.ಗೆ ನಿಗದಿಪಡಿಸಲಾಗಿತ್ತು. ಶ್ರೀನಗರದಲ್ಲಿ ಸಿಲುಕಿಕೊಂಡಿದ್ದ ಹಾಗೂ ಹಿಂತಿರುಗಲು ಬಯಸಿದ್ದ ಹಲವಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಟಿಕೆಟ್ ಬೆಲೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊAಡಿದ್ದರು.
ಇದಕ್ಕೂ ಮುನ್ನ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮಾತನಾಡಿ, ಶ್ರೀನಗರ ವಿಮಾನ ದರವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ನಗರದಲ್ಲಿರುವ ಪ್ರವಾಸಿಗರ ಪ್ರಯಾಣಕ್ಕಾಗಿ ಬುಧವಾರ ಇನ್ನೂ ಮೂರು ಹೆಚ್ಚುವರಿ ವಿಮಾನಗಳು ಸಂಚರಿಸುತ್ತವೆ ಎಂದು ಹೇಳಿದ್ದರು.
ಈಗಾಗಲೇ ಏರ್ ಇಂಡಿಯಾ ಮತ್ತು ಇಂಡಿಗೋ, ಶ್ರೀನಗರದಿಂದ ದೆಹಲಿ ಮತ್ತು ಮುಂಬೈಗೆ ಒಟ್ಟು ನಾಲ್ಕು ಹೆಚ್ಚುವರಿ ವಿಮಾನಗಳ ಸೇವೆ ಆರಂಭಿಸಿದೆ. ಟಿಕೆಟ್ ಮರುಹೊಂದಾಣಿಕೆ ಮತ್ತು ರದ್ದತಿ ಶುಲ್ಕಗಳನ್ನು ಸಹ ಮನ್ನಾ ಮಾಡಿವೆ. ಏ.22ರಂದು ಅಥವಾ ಅದಕ್ಕೂ ಮೊದಲು ಮಾಡಿದ ಬುಕಿಂಗ್‌ಗಳಿಗೆ ಅನ್ವಯವಾಗುವ ಪ್ರಯಾಣಕ್ಕಾಗಿ ಮರುಹೊಂದಿಸುವಿಕೆ ಅಥವಾ ರದ್ದತಿಗೆ ಏ.30 ರವರೆಗೆ ವಿನಾಯಿತಿ ನೀಡಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇನ್ನೂ, ಶ್ರೀನಗರದಿಂದ ವಿವಿಧ ಕಡೆಗೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ