Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

Public TV
3 Min Read
Brahmos Missile

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ನೌಕಾಸೇನೆ (Indian Navy) ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ಧನೌಕೆಯಿಂದ ಹಾರಿಸಿದೆ.

ಯುದ್ಧ ನೌಕೆಯಿಂದ ಹಾರಿಸಿ Anytime, Anywhere ಎಂದು ಭಾರತೀಯ ನೌಕಾಸೇನೆ ಪೋಸ್ಟ್‌ ಮಾಡಿದೆ.

ಪೋಸ್ಟ್‌ನಲ್ಲಿ ಏನಿದೆ?
ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನು ನಡೆಸಿದೆ. ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಹೇಳಿದೆ.

ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ (BrahMos) ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ.

ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.

ಬ್ರಹ್ಮೋಸ್‌ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮೋದಿ

ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುವ ಬ್ರಹ್ಮೋಸ್‌ 800 ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.brahmos supersonic

 

ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್‌ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್‌ ಜಾಮಿಂಗ್‌ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು 2001ರ ಜೂನ್‌ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ.

BrahMos

ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್‌
ಈ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು,ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.

Share This Article