ಶಿವಮೊಗ್ಗ: ಕಾಶ್ಮೀರದ (Jammu and Kashmir) ಪಹಲ್ಗಾಮ್‍ನಲ್ಲಿ ಉಗ್ರರ ಗುಂಡಿಗೆ ಬಲಿಯಾದ (Pahalgam Terror Attack) ಉದ್ಯಮಿ ಮಂಜುನಾಥ್ ರಾವ್ ಅವರ ಮೃತದೇಹ ಶಿವಮೊಗ್ಗಕ್ಕೆ (Shivamogga) ತಲುಪಿದೆ.
ಬೆಂಗಳೂರಿನಿಂದ ತುಮಕೂರು, ಚಿತ್ರದುರ್ಗ ಮಾರ್ಗವಾಗಿ ಆಂಬುಲೆನ್ಸ್ ಮೂಲಕ ಮಂಜುನಾಥ್ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ಸಾಗಿಸಲಾಯಿತು. ಈ ವೇಳೆ ತುಮಕೂರಿನ ಕ್ಯಾತಸಂದ್ರದ ಟೋಲ್ ಗೇಟ್‍ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಗರ ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ಮಂಜುನಾಥ್ ರಾವ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮನೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಶಿವಮೊಗ್ಗನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಜನ ಬರುವ ನಿರೀಕ್ಷೆ ಇದ್ದು, ಮನೆಯ ಮುಂದೆ ಬ್ಯಾರಿಕೇಡ್‍ಗಳನ್ನು ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.