ಒಂದು ಹೊಸ ಸಿನಿಮಾ ರೂಪುಗೊಳ್ಳುತ್ತಿದೆ ಎಂಬ ಸುಳಿವು ಸಿಕ್ಕಾಕ್ಷಣವೇ ಅದರಲ್ಲಿ ಅಡಕವಾಗಿರಬಹುದಾದ ಕಥೆಯ ಬಗ್ಗೆ ಕುತೂಹಲವೊಂದು ಹರಳುಗಟ್ಟಲಾರಂಭಿಸುತ್ತೆ. ಸಾಮಾನ್ಯವಾಗಿ, ಇಂಥಾ ಕಲ್ಪನೆಗಳೆಲ್ಲವೂ ಮಾಮೂಲು ಶೈಲಿಯ ಬಿಂದುವಿನಲ್ಲಿಯೇ ಗಿರಕಿ ಹೊಡೆಯುತ್ತವೆ. ಆದರೆ, ನಮ್ಮೆಲ್ಲರ ಪಾಲಿಗೆ ಚಿರಪರಿಚಿತವಾಗಿರುವ, ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಒಂದು ಸಿನಿಮಾ ರೂಪುಗೊಳ್ಳುತ್ತದೆ ಎಂದರೆ ಸಹಜವಾಗಿಯೇ ಅಚ್ಚರಿ ಮೂಡಿಕೊಳ್ಳುತ್ತೆ. ಅಂಥಾದ್ದೊಂದು ಕುತೂಹಲ ತಾನೇತಾನಾಗಿ ಮೂಡಿಕೊಂಡಿರುವುದು ‘ಪದ್ಮಗಂಧಿ’ (Padmagandhi Film) ಎಂಬ ಸಿನಿಮಾದ ಬಗ್ಗೆ.
ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಈ ಚಿತ್ರವನ್ನು ಸುಚೇಂದ್ರ ಪ್ರಸಾದ್ (Suchendra Prasad) ನಿರ್ದೇಶನ ಮಾಡುತ್ತಿದ್ದಾರೆ. ಮಾಜಿ ಎಂಎಲ್‌ಸಿ, ಪ್ರಸಿದ್ಧ ಅಂಕಣಕಾರ್ತಿ, ಸಂಸ್ಕೃತದ ಭೂಮಿಕೆಯಲ್ಲಿ ನಾನಾ ದಿಕ್ಕಿನ ಅಧ್ಯಯನ, ಪಾಂಡಿತ್ಯದ ಮೂಲಕ ಹೆಸರಾಗಿರುವ ಎಸ್.ಆರ್ ಲೀಲಾ ಈ ಚಿತ್ರಕ್ಕೆ ಕಥೆ ಸಿದ್ಧಪಡಿಸುವುದರ ಜೊತೆಗೆ ನಿರ್ಮಾಪಕಿಯಾಗಿಯೂ ಜೊತೆಯಾಗಿದ್ದಾರೆ. ನಮ್ಮಲ್ಲಿ ದೈವೀಕ ಅನುಭೂತಿ ಸ್ಫುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ್ದ ಲೀಲಾ ಅವರ ಪಾಲಿಗೆ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರೆಯಂತೆ ಭಾಸವಾಗಲಾರಂಭಿಸಿತ್ತು. ಕಡೆಗೂ ಕಮಲ ಪುಷ್ಪದ ಬಗ್ಗೆ ನಿರಂತರವಾಗಿ ಆರೇಳು ವರ್ಷ ಅಧ್ಯಯನ ನಡೆಸಿದ್ದ ಅವರು ಕಡೆಗೂ ಅಪರೂಪದ ಕಥೆಯೊಂದನ್ನು ಸಿದ್ಧಪಡಿಸಿ, ನಂತರ ಸುಚೇಂದ್ರ ಪ್ರಸಾದ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದರು. ಇದನ್ನೂ ಓದಿ:ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ
ಸಸ್ಯ ಶಾಸ್ತ್ರದ ಪ್ರಕಾರ ಏಷ್ಯಾ ಖಂಡದ ದೇಸೀ ಹೂವಾದ ಕಮಲ, ಪುರಾಣ ಕಾಲದಿಂದಲೂ ಶ್ರೇಷ್ಠ ಪುಷ್ಪವಾಗಿ ಘನತೆ ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದ ಆರಂಭವಾಗಿ ಅರ್ವಾಚೀನ ಕಾಲದವರೆಗೂ ಅದೇ ಪ್ರಭೆಯನ್ನು ಉಳಿಸಿಕೊಂಡಿರುವ ಕಮಲ ವಿಶಾಲವಾದ ಹರವುಳ್ಳ ಅಪರೂಪದ ಪುಷ್ಪ. ಕೆದಕುತ್ತಾ ಹೋದರೆ ಈಜಿಪ್ಟ್ ನಾಗರೀಕತೆಯವರೆಗೂ ಕೂಡ ಇದರ ಪ್ರಭಾವಳಿ ಹಬ್ಬಿಕೊಂಡಿರುವ ಅಚ್ಚರಿಯೊಂದು ಎದುರಾಗುತ್ತೆ. ಸಾವಿರಾರು ವರ್ಷದ ಹಿಂದಿನ ಬೀಜವನ್ನು ಇಂದು ಬಿತ್ತಿದರೂ ಸಲೀಸಾಗಿ ಚಿಗುರೊಡೆದು, ಗಿಡವಾಗಿ, ಹೂವಾಗಿ ನಗುವ ಶಕ್ತಿ ಈ ಜಗತ್ತಿನಲ್ಲಿ ಯಾವುದಾದರೂ ಪುಷ್ಪಕ್ಕಿದೆ ಎಂದರೆ ಅದು ಕಮಲಕ್ಕೆ ಮಾತ್ರ. ಸಮರ ಕಲೆಗಳಲ್ಲಿಯೂ ಈ ಹೂವಿನ ಐತಿಹ್ಯವಿದೆ. ಮಹಾಭಾರತದಲ್ಲಿ ಘಟಿಸುವ ಯುದ್ಧದಲ್ಲಿ ನಾನಾ ವ್ಯೂಹಗಳು ರಚನೆಯಾದದ್ದು ಗೊತ್ತೇ ಇದೆ. ಚಕ್ರವ್ಯೂಹ, ಗರುಡ ವ್ಯೂಹದಂಥವುಗಳು ನಮ್ಮೆಲ್ಲರಿಗೆ ಪರಿಚಿತ. ವಿಶೇಷವೆಂದರೆ, ಅದರಲ್ಲಿ ಪದ್ಮವ್ಯೂಹವೂ ಸೇರಿಕೊಂಡಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಂಚ್ ಡೇಟ್- ಮತ್ತೆ ಡೇಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ
ಅಂದಹಾಗೆ, ಈ ಸಿನಿಮಾ ಮಕ್ಕಳ ಚಿತ್ರದ ಆವರಣದಲ್ಲಿ ಅಣಿಗೊಳ್ಳುತ್ತಿದೆ. ಗುರುಕುಲದ ಹಿನ್ನೆಲೆಯಿಂದ ಗರಿಬಿಚ್ಚಿಕೊಳ್ಳುವ ಪದ್ಮಗಂಧಿ ಸಿನಿಮಾ ಎಸ್.ಆರ್ ಲೀಲಾ ಅವರ ಕನಸಿನ ಕೂಸು. ಸಂಭಾಷಣೆ ಹಾಗೂ ನಿರ್ದೇಶನ ಸುಚೇಂದ್ರ ಪ್ರಸಾದ್, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ , ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಪರಿಪೂರ್ಣ, ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ.