ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ ಈ ಸಾಲಿನ ಅತ್ಯನ್ನತ ನಾಗರಿಕ ಸೇವಾ ಪ್ರಶಸ್ತಿ ಪದ್ಮವಿಭೂಷಣಕ್ಕೆ ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್‌ನಾಗ್ ಭಾಜನರಾಗಿದ್ದಾರೆ.
ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.
6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು 1994ರ ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆ ದಿ. ಶಂಕರನಾಗ್ ಇವರ ಕಿರಿಯ ಸಹೋದರ. ಇವರ ಪತ್ನಿ ಗಾಯತ್ರಿ ಕೂಡಾ ಕನ್ನಡ ಚಿತ್ರರಂಗದ ಹಿರಿಯನಟಿ.
1972 ರಲ್ಲಿ ಕನ್ನಡ ಚಿತ್ರ `ಸಂಕಲ್ಪ’ ಮತ್ತು ಶ್ಯಾಮ ಬೆನಗಲ್‌ರ `ಅಂಕುರ್’ ಚಿತ್ರದಿಂದ ಸಿನಿಪಯಣ ಶುರು ಮಾಡಿದರು. ಅನಂತನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ವಿಶೇಷ. ಮುಂದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ `ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರದಲ್ಲಿ ಮಿಂಚಿದರು. ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತನಾಗ್ ನಟಿಸಿದ್ದಾರೆ.