ಬೆಂಗಳೂರು: ಅಕ್ಷರ ಸಂತ ಅಂತಲೇ ಖ್ಯಾತಿ ಪಡೆದ ಹರೇಕಳ ಹಾಜಬ್ಬ ಇಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ವೇಳೆ ಮಾತನಾಡಿದ ಹರೇಕಳ ಹಾಜಬ್ಬ, ನಾನು ಹೆಚ್.ಆರ್ ರಂಗನಾಥ್ ಅವರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇಂದು ಬಹಳಷ್ಟು ಹೆಮ್ಮೆಯ ದಿನವಾಗಿದೆ. ಇಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಸಂತೋಷವಾಗಿದೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ. ಈ ಪ್ರಶಸ್ತಿಗೆ ನಾನು ಅರ್ಹ ಎಂದು ನಾನು ಯಾವತ್ತು ಕನಸೂ ಕಂಡಿಲ್ಲ. 2003 ಸೆಪ್ಟಂಬರ್ 14 ರಂದು ಹೊಸದಿಗಂತ ಪತ್ರಿಕೆ ನನ್ನನ್ನು ಬೆಳಕಿಗೆ ತಂದಿತ್ತು. ಅದೇ ವರ್ಷ ಕನ್ನಡಪ್ರಭ ಕೂಡಾ ಈ ವಿಚಾರವಾಗಿ ಸುದ್ದಿ ಮಾಡಿತ್ತು. ಆಗ ಎಚ್. ಆರ್ ರಂಗನಾಥ್ ಅವರು ಎಡಿಟರ್ ಆಗಿದ್ದರು. ಆಗ ಅವರು ನನ್ನ ಹರೇಕಳ ಗ್ರಾಮಕ್ಕೆ ಭೇಟಿಕೊಟ್ಟಿದ್ದರು. ನಾನು ಪದ್ಮಶ್ರೀ ಪ್ರಶಸ್ತಿ ಪಡೆದ ಈ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡೆನು. ಮೂಲೆಯಲ್ಲಿ ಇದ್ದ ಜನರನ್ನು ದೇಶಕ್ಕೆ ತೋರಿಸಿಕೊಟ್ಟರು. ನಾನು ಅವರಿಗೆ ಖುಣಿಯಾಗಿದ್ದೇನೆ ಎಂದು ಹೇಳಿದರು.ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
Advertisement
Advertisement
ರಾಜ್ಯದ್ಯಾಂತ ಬಹಳಷ್ಟು ಜನರು ನನನ್ನು ಗುರುತಿಸಿದರು. ನಾನು ಹೆಚ್ ಆರ್ ರಂಗನಾಥ್ ಅವರಿಗೂ ಆಭಾರಿಯಾಗಿದ್ದೇನೆ. ನಾನು ಸಂಘಟನೆಗಳ ಬೆಂಬಲದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಪ್ರಯತ್ನಿಸಿದೆ. ಈಗ ಕಾಲೇಜು ತರುವ ಉದ್ದೇಶ ಇದ್ದು ಸರ್ಕಾರದ ಸಹಕಾರ ಕೇಳಿದ್ದೇನೆ. ಚಪ್ಪಲಿ ಬಿಟ್ಟು ಪ್ರಶಸ್ತಿ ಸ್ವೀಕಾರ ಮಾಡಿದ್ದೇನೆ. ನನ್ನನ್ನು ಗುರುತಿಸಿದ ಎಲ್ಲರಿಗೂ ಧನ್ಯವಾದಗಳು. ಚಹಕೂಟದಲ್ಲಿ ಪ್ರಧಾನಿ ಮೋದಿಯವರನ್ನು ಮಾತನಾಡಿಸಿದೆ. ನನ್ನ ಕೈ ಮುಟ್ಟಿ ಪ್ರಧಾನಿ ಮೋದಿ ಮಾತನಾಡಿಸಿದರು ಎಂದು ಹೇಳುತ್ತಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: 119 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
Advertisement
Advertisement
ಸರ್ಕಾರಿ ಶಾಲೆ ಇದ್ದರೆ ಬಡವರ ಮಕ್ಕಳಿಗೆ ಸಹಾಯವಾಗುತ್ತದೆ. ಎಲ್ಲ ಕಡೆ ಸರ್ಕಾರಿ ಶಾಲೆ ಇದೆ, ಆದರೆ ನಮ್ಮ ಊರಿನಲ್ಲಿ ಒಂದು ಶಾಲೆ ಬೇಕು ಎಂದು ನನಗೆ ಅನ್ನಿಸಿತ್ತು. ದಾನಿಗಳ ಹತ್ತಿರ ಸಹಾಯವನ್ನು ಕೇಳಿದ್ದೇನೆ. ಸರ್ಕಾರವು ನನಗೆ ಸಹಾಯ ಮಾಡಿದೆ. ನನ್ನ ಹಣವನ್ನು ನಾನು ಹಾಕಿದ್ದೇನೆ ಎಂದು ಹೇಳಲು ತಯಾರಿಲ್ಲ. ಹಲವರು ನನಗೆ ಸಹಾಯ ಮಾಡಿದ್ದಾರೆ. ಈ ಮಣ್ಣಿಗೆ ನಾನು ಖುಣಿಯಾಗಿದ್ದೇನೆ ಎಂದರು.
ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಲೋಕಸಭೆ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅನೇಕರಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ. ಚಹಾಕೂಟದಲ್ಲಿ ಭಾಗಿಯಾದ ವೇಳೆ ಪ್ರಧಾನಿ ಮೋದಿಯವರು ಕೈ ಮುಟ್ಟಿ ಮಾತನಾಡಿಸಿದರು. ಇದು ನನ್ನ ಬದುಕಿನಲ್ಲಿ ಮರೆಯಲಾಗದ ದಿನ. ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕನ್ನಡದಲ್ಲಿ ಮಾತನಾಡಿದೆ ಅವರು ಸಂತೋಷ ವ್ಯಕ್ತಪಡಿಸಿದರು ಎಂದರು.
ಶಾಲೆ ನಿರ್ಮಾಣಕ್ಕೆ ಶ್ರಮಿಸಿದ ಬಳಿಕ ಕಾಲೇಜು ನಿರ್ಮಾಣದ ಕನಸು ಇದ್ದು, ಕಾಲೇಜು ನಿರ್ಮಾಣಕ್ಕೆ ನೆರವು ನೀಡುವಂತೆ ಕೇಳಿದ್ದೇನೆ. ಸರ್ಕಾರ ಸಹಾಯ ಮಾಡಬಹುದು ಎಂದು ನಿರೀಕ್ಷೆ ಇದೆ. ಕಾಲೇಜು ನಿರ್ಮಾಣ ಆದರೆ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ನನ್ನ ತಂದೆ ತಾಯಿ ಶಿಕ್ಷಣ ಪಡೆದಿಲ್ಲ, ನಾನು ಓದಿಲ್ಲ ಆದರೆ ಮುಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.