ಬೆಳಗಾವಿ: ಸಿಎಂ ಕುಮಾರಸ್ವಾಮಿಯವರು ಸೀತಾಪುರದಲ್ಲಿ ನಾಟಿ ಮಾಡುವ ಕಾರ್ಯಕ್ರಮ ಕೇವಲ ಶೋ ಆಫ್ ಎಂದು ಬಿಜೆಪಿಯ ಮುಖಂಡ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸಿಎಂ ನಾಟಿ ಕಾರ್ಯಕ್ರಮ ಕುರಿತು ಚಿಕ್ಕೋಡಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವಾಗಲೋ ಒಮ್ಮೆ ನಾಟಿ ಮಾಡಿದರೇ ರೈತನಾಗುವುದಿಲ್ಲ. ವಾರದಲ್ಲಿ ಮೂರು-ನಾಲ್ಕು ದಿನವಾದರೂ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆವಾಗ ಮಾತ್ರ ರೈತನಾಗಲು ಸಾಧ್ಯ. ಭತ್ತ ನಾಟಿ ಕಾರ್ಯಕ್ರಮದಿಂದ ಯಾವುದೇ ಲಾಭವಿಲ್ಲ. ರೈತರು ಇದನ್ನು ನಾಟಕ ಎಂದು ತಿಳಿದುಕೊಂಡು ಬೀಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ ಹಾಗೂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮಾಡಿರುವ ಯಾವುದೇ ಗ್ರಾಮಗಳು ಇದುವರೆಗೂ ಉದ್ದಾರವಾಗಿಲ್ಲ ಎಂದು ಹೇಳಿ ವ್ಯಂಗ್ಯವಾಡಿದರು.
ಸದ್ಯ ಮಟ್ಟಿಗೆ ಸಿಎಂ ಕುಮಾರಸ್ವಾಮಿಯವರ ಪರಿಸ್ಥಿತಿ ಹೇಗಾಗಿದೆ ಎಂದರೆ, ಕುಣಿಯಲು ಬಾರದವರು ನೆಲ ಡೊಂಕು ಅನ್ನುವ ಹಾಗೇ ಆಗಿದೆ. ಕುಮಾರಸ್ವಾಮಿಯವರು ರೈತರ ಸಂಪೂರ್ಣ ಸಾಲಮನ್ನಾ ಮಾಡದಿರುವ ಪಕ್ಷದಲ್ಲಿ ಬಹಿರಂಗವಾಗಿ ರೈತರ ಕ್ಷಮೆ ಕೇಳಬೇಕು. ಆಗಲಾದರೂ ರೈತರು ಅವರನ್ನು ಕ್ಷಮಿಸಬಹುದು. ಕೇವಲ ಆಶ್ವಾಸನೆ ನೀಡುವುದನ್ನು ನಿಲ್ಲಿಸಿ, ಸಾಲಮನ್ನಾದಲ್ಲಿರುವ ಗೊಂದಲಗಳನ್ನು ಬಗೆಹರಿಬೇಕು. ಇಲ್ಲವಾದಲ್ಲಿ ಬಿಜೆಪಿಯ ಸಾಲಮನ್ನಾದ ಪರ ಪ್ರತಿಭಟನೆ ಮುಂದುವರೆಸಲಿದೆ ಎಂದು ಹೇಳಿದರು.
ಹಾಸನಕ್ಕೆ ಕೆ-ಶಿಪ್ ಅನ್ನು ಸ್ಥಳಾಂತರ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಉತ್ತರ ಕರ್ನಾಟಕವನ್ನು ತಾರತಮ್ಯ ಮಾಡುತ್ತಿದೆ. ರೇವಣ್ಣರವರು ವಿಶ್ವಬ್ಯಾಂಕ್ ಪತ್ರದ ಹಿನ್ನೆಲೆಯಲ್ಲಿ ಸ್ಥಳಾಂತರಿಸಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೇ ಆ ಪತ್ರವನ್ನು ಬಹಿರಂಗಗೊಳಿಸಲಿ. ಕೆ-ಶಿಪ್ ನ ಸ್ಥಳಾಂತರವು ಉತ್ತರ ಕರ್ನಾಟಕದ ಅನ್ಯಾಯಕ್ಕೆ ಉದಾಹರಣೆಯಾಗಿದೆ. ತಕ್ಷಣವೇ ಕೆ-ಶಿಪ್ ಅನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ ನಿಜವಾದ ಸೂಪರ್ ಸಿಎಂ ರೇವಣ್ಣ ಆಗಿದ್ದಾರೆ ಎಂದು ಅವರ ನಡವಳಿಕೆಗಳಿಂದ ತಿಳಿಯುತ್ತದೆ ಎಂದು ರೇವಣ್ಣರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪಕ್ಷವು ಸರ್ಕಾರವನ್ನು ಬೀಳಿಸುವ ಕಾರ್ಯವನ್ನು ಮಾಡುತ್ತಿಲ್ಲ. ಆಪರೇಷನ್ ಕಮಲ ಎಂಬುವುದು ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಹತಾಶರಾಗಿ ಹೇಳುತ್ತಿದ್ದಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews