ಗೆಲ್ಲುವ ಛಲಕ್ಕೆ ಮಾಸ್ಟರ್ ಪೀಸ್ ಈ ಪಡ್ಡೆಹುಲಿ!

Public TV
3 Min Read
PADDE HULI 1 copy

ಹೆಜ್ಜೆ ಹೆಜ್ಜೆಗೂ ಅಬ್ಬರಿಸುತ್ತಾ ಸಾಗಿ ಬಂದಿದ್ದ ಪಡ್ಡೆಹುಲಿಯೀಗ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಈ ಚಿತ್ರ ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗೋ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಉಳಿದೆಲ್ಲ ಭಾವಗಳ ಜೊತೆಗೆ ಕನ್ನಡತನ, ಸಂಗೀತ ಪ್ರೇಮವನ್ನೂ ಉಸಿರಾಗಿಸಿಕೊಂಡಿರೋ ಮಾಸ್ ಗೆಟಪ್ಪಿನ ಪಡ್ಡೆಹುಲಿ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

ಗುರುದೇಶಪಾಂಡೆ ನಿರ್ದೇಶನದ ಚಿತ್ರಗಳೆಂದರೇನೇ ನೆಲದ ಘಮಲಿನ ಕಥೆಯ ನಿರೀಕ್ಷೆಗಳೇಳುತ್ತವೆ. ಆದರೆ ಕಾಲೇಜು ಸ್ಟೋರಿ ಎಂಬಂತೆ ಬಿಂಬಿತವಾಗಿದ್ದ ಪಡ್ಡೆಹುಲಿಯೂ ಅಂಥಾದ್ದೇ ಸಾರ ಹೊಂದಿರುತ್ತದಾ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಆದರೆ, ಪಡ್ಡೆಹುಲಿಯ ಕಥೆ ಕಾಲೇಜು ಕಾರಿಡಾರಿನಾಚೆಗೂ ಬಳಸಿ ಬಂದು, ಅಪ್ಪಟ ನೆಲದ ಸೊಗಡಿನ ಘಮಲನ್ನು ಪ್ರೇಕ್ಷಕರೆದೆಗೂ ಮೊಗೆದು ತಂದು ಸುರುವಿದೆ. ಅಂಥಾ ಪುಳಕ, ಥ್ರಿಲ್ಲಿಂಗ್, ಮೈನವಿರೇಳಿಸೋ ಸಾಹಸ, ಹನಿಗಣ್ಣಾಗುವಂಥಾ ತಿರುವುಗಳು, ಗಾಢ ಪ್ರೇಮ ಮತ್ತು ಸಂಗೀತಮಯ ಪಯಣ… ಇದಿಷ್ಟೂ ಭಾವಗಳೊಂದಿಗೆ ಪಡ್ಡೆಹುಲಿ ಅಪರೂಪದ ಚಿತ್ರ ನೋಡಿದ ಅನುಭವವೊಂದಕ್ಕೆ ಪ್ರೇಕ್ಷಕರನ್ನೆಲ್ಲ ವಾರಸುದಾರರನ್ನಾಗಿಸುತ್ತದೆ.

Paddehuli AA copy

ಶಾಲಾ ಆವರಣದಲ್ಲಿ ಕನ್ನಡ ಪ್ರೇಮದ ಹಿಮ್ಮೇಳದೊಂದಿಗೇ ಪಡ್ಡೆಹುಲಿಯ ಕಥೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕನ್ನಡಕ್ಕೆ ಅವಮಾನಿಸಿದರೆ ಶಾಲೆಯ ಮುಖ್ಯಸ್ಥರ ಕಪಾಳಕ್ಕೆ ಬಾರಿಸಲೂ ಹಿಂದೆ ಮುಂದೆ ನೋಡದ ತಂದೆಯಾಗಿ ಕ್ರೇಜಿóಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಕಥೆಯೆಂಬುದು ಕಾಲೇಜಿನೊಳಗೇ ನಡೆದರೂ ಕೂಡಾ ಅದರ ಭಾವಗಳು ಬದುಕಿನ ನಾನಾ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಕಾಲೇಜೊಂದರ ಭಾವಲೋಕವನ್ನು ಹಸಿ ಹಸಿಯಾಗಿ ಹಿಡಿದಿಡೋ ಚಿತ್ರಗಳು ಸಾಕಷ್ಟು ಬಂದಿರಬಹುದು. ಆದರೆ ಪಡ್ಡೆಹುಲಿಯಷ್ಟು ಪರಿಣಾಮಕಾರಿಯಾದ ಎನರ್ಜಿಟಿಕ್ ಕಥೆಗಳು ತುಂಬಾನೇ ವಿರಳ. ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ಹಾಕಿರುವ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.

ಇಲ್ಲಿ ಕಷ್ಟದಿಂದಲೇ ಕಾಲೇಜು ಕಾರಿಡಾರಿಗೆ ಕಾಲಿಟ್ಟು ಆ ಬಳಿಕ ತಾನೇ ತಾನಾಗಿ ಆ ಲೋಕದ ನಾನಾ ಪಲ್ಲಟಗಳಿಗೆ ಪಕ್ಕಾಗುವ ಮಧ್ಯಮ ವರ್ಗದ ಹುಡುಗನ ಕಥೆಯಿದೆ. ಈ ಹಾದಿಯಲ್ಲೆದುರಾಗೋ ಎಲ್ಲ ಸವಾಲುಗಳನ್ನೂ ಎದುರಿಸುತ್ತಾ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗುವ ಪಕ್ಕಾ ಮಾಸ್ ಪಾತ್ರಕ್ಕೆ ನಾಯಕ ಶ್ರೇಯಸ್ ಜೀವ ತುಂಬಿದ್ದಾರೆ. ಪ್ರತೀ ಫ್ರೇಮಿನಲ್ಲಿಯೂ ಪಳಗಿದ ನಟನಂಥಾ ಪ್ರೌಢ ನಟನೆಯನ್ನೂ ಅವರು ನೀಡಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಅದಕ್ಕೆ ಭರ್ಜರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ರವಿಚಂದ್ರನ್, ಸುಧಾ ರಾಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಪಡ್ಡೆಹುಲಿಯ ಆವೇಗಕ್ಕೆ ಕಸುವು ತುಂಬಿದ್ದಾರೆ.

Padde Huli 2

ಪಡ್ಡೆಹುಲಿಯ ಕಥೆ ತೆರೆದುಕೊಳ್ಳೋದೇ ಚಿತ್ರದುರ್ಗದ ನೆಲದಿಂದ. ಇಲ್ಲಿನ ಮಧ್ಯಮವರ್ಗದ ಕನ್ನಡ ಮೇಷ್ಟರ ಕುಟುಂಬದ ಕೂಸಾದ ನಾಯಕ ಸಂಪತ್ ರಾಜ್ ಪಾಲಿಗೆ ಸಂಗೀತವೆಂದರೆ ಬಾಲ್ಯದಿಂದಲೂ ಪ್ರಾಣ. ತಾನು ಜಗತ್ತೇ ಬೆರಗಾಗಿ ನೋಡುವಂಥಾ ಸಂಗೀತಗಾರನಾಗಬೇಕೆಂಬ ಕನಸು ಆತನ ಮನಸಲ್ಲಿ ಎಳವೆಯಿಂದಲೇ ಮೊಳಕೆಯೊಡೆದು ಬಿಟ್ಟಿರುತ್ತೆ. ಆದರೆ ಹೆತ್ತವರಿಗೆ ಮಗ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ. ಅತ್ತ ಜೀವದಂತೆ ಪ್ರೀತಿಸೋ ಹೆತ್ತವರ ಆಸೆಯನ್ನೂ ಹೊಸಕುವಂತಿಲ್ಲ. ತನ್ನ ಕನಸನ್ನೂ ಕೈ ಬಿಡುವಂತಿಲ್ಲ. ಕಡೆಗೂ ಹೆತ್ತವರ ಆಸೆಯಂತೆಯೇ ದುರ್ಗದಿಂದ ಬೆಂಗಳೂರಿಗೆ ಬಂದು ಇಂಜಿನಿಯರಿಂಗ್ ಕಾಲೇಜಿಗೆ ಅಡಿಯಿರಿಸೋ ದುರ್ಗದ ಪಡ್ಡೆ ಹುಲಿಗೆ ನಾನಾ ಸವಾಲುಗಳೆದುರಾಗುತ್ತವೆ. ಅವಮಾನಗಳು ಎದೆಗಿರಿಯುತ್ತವೆ. ಇದೆಲ್ಲದರಾಚೆಗೆ ಪಡ್ಡೆಹುಲಿ ಸಂಗೀತಗಾರನಾಗೋ ಕನಸನ್ನು ನನಸು ಮಾಡಿಕೊಳ್ತಾನಾ ಎಂಬುದೇ ಅಸಲೀ ಕುತೂಹಲ. ಇದನ್ನಿಟ್ಟುಕೊಂಡು ಯಾರೇ ಚಿತ್ರಮಂದಿರಕ್ಕೆ ತೆರಳಿದರೂ ಪಡ್ಡೆ ಹುಲಿಯ ಕಡೆಯಿಂದ ಅಪೂರ್ವ ಅನುಭವವಾಗೋದು ಗ್ಯಾರೆಂಟಿ!

ದುರ್ಗದಿಂದ ಆರಂಭವಾಗಿ ಕಾಲೇಜು ಕಾರಿಡಾರಿನಲ್ಲಿ ಹರಿದಾಡೋ ಈ ಕಥೆ ಅಪರೂಪದ್ದು. ಫ್ಯಾಮಿಲಿ, ಪ್ರೀತಿ, ಸಾಹಸ, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವ ಹೊಂದಿರೋ ಈ ಕಥೆಯಲ್ಲಿ ಆಪ್ತವಾಗೋದು ಪಡ್ಡೆಹುಲಿಯ ಗೆಲ್ಲುವ ಛಲ. ಈ ಚಿತ್ರವನ್ನು ಯಾರೇ ನೋಡಿದರೂ ಪಡ್ಡೆಹುಲಿಯಾಗಿ ಅಬ್ಬರಿಸಿರೋ ಶ್ರೇಯಸ್ ಪಾತ್ರ ಮನಸೊಳಗೆ ಪ್ರತಿಷ್ಠಾಪಿತವಾಗುತ್ತೆ. ಶ್ರೇಯಸ್ ಅವರಂತೂ ಇದು ಮೊದಲ ಚಿತ್ರವೆಂಬ ಸುಳಿವೇ ಬಿಟ್ಟುಕೊಡದಂತೆ ಅಬ್ಬರಿಸಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ಥರ ಥರದ ಗೆಟಪ್ಪುಗಳಲ್ಲಿ ಅದಕ್ಕೆ ತಕ್ಕುದಾಗಿ ಅಭಿನಯಿಸೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕವೇ ಮಾಸ್ ಹೀರೋ ಆಗಿ ನೆಲೆಗೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಖಂಡ ಹನ್ನೊಂದು ಹಾಡುಗಳು ಹೊರ ಬಂದಿದ್ದಕ್ಕೂ ಕಥೆಗೂ ನೇರಾ ನೇರ ಕನೆಕ್ಷನ್ನುಗಳಿವೆ. ಅದೇನೆಂಬುದೂ ಕೂಡಾ ಈ ಕಥೆಯ ಪ್ರಧಾನ ಸಾರ.

padde huli 5 1

ಹೊಸಾ ನಾಯಕನ ಆಗಮನಕ್ಕೆ ಏನೇನು ಬೇಕೋ ಅಂಥಾ ಎಲ್ಲ ಅಂಶಗಳೊಂದಿಗೆ ಗುರುದೇಶಪಾಂಡೆ ಅವರು ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ರವಿಚಂದ್ರನ್ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ಹೊಸತನವಿದೆ. ನಿರ್ಮಾಪಕ ರಮೇಶ್ ರೆಡ್ಡಿಯವರ ಧಾರಾಳತನವೆಂಬುದು ಪಡ್ಡೆಹುಲಿಯನ್ನು ಪ್ರತೀ ಹಂತದಲ್ಲಿಯೂ ಲಕ ಲಕಿಸುವಂತೆ ಮಾಡಿದೆ. ಕೊಂಚ ಆಚೀಚೆ ಆಗಿದ್ದರೂ ಸಾಮಾನ್ಯ ಕಥೆಯಾಗಬಹುದಾಗಿದ್ದ ಪಡ್ಡೆಹುಲಿಯ ಚಮತ್ಕಾರವನ್ನು ವಿಶೇಷವಾಗಿಸಿರೋದು ನಿರ್ದೇಶಕರ ಜಾಣ್ಮೆ. ಒಟ್ಟಾರೆಯಾಗಿ ಕನ್ನಡಕ್ಕೆ ಮಾಸ್ ಹೀರೋ ಎಂಟ್ರಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಶ್ರೇಯಸ್ ಪಡ್ಡೆಹುಲಿಯಾಗಿ ಖಂಡಿತಾ ಇಷ್ಟವಾಗುತ್ತಾರೆ.

ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *