ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಪ್ರೇಕ್ಷಕರಿಗೆ ಹತ್ತಿರವಾದದ್ದೇ ಹಾಡುಗಳ ಮೂಲಕ. ಈ ವಿಚಾರದಲ್ಲಿ ಈ ಚಿತ್ರದ ದಾಖಲೆಯನ್ನು ಯಾರೂ ಸದ್ಯಕ್ಕೆ ಮುರಿಯೋದು ಕಷ್ಟವಿದೆ. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ!
ಬದುಕು ಜಟಕಾ ಬಂಡಿ ಎಂಬ ಈ ಹಾಡು ಇಂದು ರಾತ್ರಿ ಒಂಬತ್ತು ಘಂಟೆಗೆ ಪಿಆರ್ ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ. ಹೀಗೆ ಹೊರ ಬರಲಿರೋ ಲಿರಿಕಲ್ ವೀಡಿಯೋ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.
ಹಲವಾರು ವಿಚಾರಗಳಲ್ಲಿ ಪಡ್ಡೆಹುಲಿ ಮುಖ್ಯವಾಗುತ್ತದಾದರೂ ಶ್ರೇಯಸ್ ನಾಯಕನಾಗಿ ಲಾಂಚ್ ಆಗುತ್ತಿರೋ ಈ ಚಿತ್ರದ ಬಗ್ಗೆ ಹೇಳ ಹೊರಟರೆ ಮೊದಲು ಕಾಣಸಿಗೋದೇ ಹಾಡುಗಳ ಮೆರವಣಿಗೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮಾಡಿರೋ ಹನ್ನೊಂದು ಹಾಡುಗಳೂ ಈಗ ಟ್ರೆಂಡಿಂಗ್‍ನಲ್ಲಿವೆ. ಅದರಲ್ಲಿ ಐದು ಹಾಡುಗಳಂತೂ ನಿಜಕ್ಕೂ ವಿಶೇಷವಾದವುಗಳು. ಅದರಲ್ಲಿ ಈಗ ಬಿಡುಗಡೆಯಾಗಲಿರೋ ಬದುಕು ಜಟಕಾಬಂಡಿ ಕೂಡಾ ಸೇರಿಕೊಂಡಿದೆ.
ಬಹುಶಃ ಪ್ರೇಮಲೋಕದ ನಂತರದಲ್ಲಿ ಪಡ್ಡೆಹುಲಿಯೇ ಹಾಡುಗಳ ವಿಚಾರದಲ್ಲಿ ಫಸ್ಟ್. ಇಷ್ಟು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿಯೂ ಇರಲಿಲ್ಲ. ಅಷ್ಟು ಸಂಖ್ಯೆಯ ಹಾಡುಗಳೆಲ್ಲವೂ ಹಿಟ್ ಆಗಿವೆ ಅನ್ನೋದು ಪಡ್ಡೆಹುಲಿಯ ನಿಜವಾದ ಹೆಗ್ಗಳಿಕೆ.