ಬೆಂಗಳೂರು: ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಅದ್ದೂರಿತನ ಎಂಥಾದ್ದೆಂಬುದಕ್ಕೆ ಹಾಡುಗಳೇ ಸೂಕ್ತ ಉದಾಹರಣೆಯಾಗಿ ಎಲ್ಲೆಡೆ ಹರಿದಾಡುತ್ತಿವೆ. ಬಹುಶಃ ಓರ್ವ ಹೊಸಾ ಹೀರೋನನ್ನು ನಂಬಿಕೊಂಡು ಇಷ್ಟು ದೊಡ್ಡ ಮಟ್ಟದ ಬಜೆಟ್ಟಿನಲ್ಲಿ ತಯಾರಾದ ಕನ್ನಡದ ಮೊದಲ ಸಿನಿಮಾ ಪಡ್ಡೆಹುಲಿಯೇ ಇರಬೇಕು!
ಹೊಸಾ ಹೀರೋ ಅಂದರೇನೇ ಬೆಚ್ಚಿಬಿದ್ದು ಹಿಂದೆ ಸರಿಯೋರೇ ಹೆಚ್ಚು. ಆದರೆ ಹೊಸಾ ಹುಡುಗ ಶ್ರೇಯಸ್ ನಾಯಕನಾಗಿರೋ ಪಡ್ಡೆಹುಲಿ ಚಿತ್ರಕ್ಕೆ ನಿರ್ಮಾಪಕ ಎಂ.ರಮೇಶ್ ರೆಡ್ಡಿಯವರು ಹಣ ಖರ್ಚು ಮಾಡುತ್ತಿರೋ ಪರಿ ಕಂಡು ಗಾಂಧಿನಗರದ ಮಂದಿಯೇ ಅವಾಕ್ಕಾಗಿದ್ದಾರೆ. ಪ್ರೇಕ್ಷಕರೂ ಅಚ್ಚರಿಗೊಂಡಿದ್ದಾರೆ. ಆದರೆ ನಿರ್ಮಾಪಕ ರಮೇಶ್ ರೆಡ್ಡಿಯವರದ್ದು ಮಾತ್ರ ಹೇಗಾದರೂ ಸರಿ, ಸಿನಿಮಾ ಅಚ್ಚಕಟ್ಟಾಗಿ, ಅದ್ದೂರಿಯಾಗಿ ಮೂಡಿ ಬರಬೇಕೆನ್ನುವುದೊಂದೇ ಅಚಲ ಉದ್ದೇಶ!
Advertisement
Advertisement
ಚಿತ್ರೀಕರಣಕ್ಕೂ ಮುನ್ನ ಮಾಡಿರೋ ಪ್ಲಾನಿಗಿಂತಲೂ ಕೊಂಚ ಕಾಸು ಖರ್ಚಾದರೂ ಕೊಸರಾಡೋದು ಮಾಮೂಲು. ನಿರ್ಮಾಪಕರ ಬಾಧೆಯೂ ಅಂಥಾದ್ದೇ ಇರುತ್ತೆ. ಆದರೆ ರಮೇಶ್ ರೆಡ್ಡಿಯವರ ಔದಾರ್ಯ ಕಂಡು ನಿರ್ದೇಶಕ ಗುರುದೇಶಪಾಂಡೆ ಸೇರಿದಂತೆ ಇಡೀ ಚಿತ್ರತಂಡವೇ ಅಚ್ಚರಿಗೊಂಡಿದೆ. ಯಾಕೆಂದರೆ ಪಡ್ಡೆಹುಲಿಯನ್ನು ಅಂದಗಾಣಿಸೋ ಯಾವ ಐಡಿಯಾಗಳಿಗೂ ರಮೇಶ್ ರೆಡ್ಡಿಯವರು ಬೇಡ ಅನ್ನಲೇ ಇಲ್ಲ. ಅವರು ಅಷ್ಟೊಂದು ಪ್ರೀತಿ, ಕಾಳಜಿ ತೋರಿಸದೇ ಇದ್ದಿದ್ದರೆ ಬರೋಬ್ಬರಿ ಹನ್ನೊಂದು ಹಾಡುಗಳು ರೂಪುಗೊಳ್ಳೋದೂ ಸಾಧ್ಯವಿರುತ್ತಿರಲಿಲ್ಲ!
Advertisement
ನಿರ್ಮಾಪಕರು ಹೀಗೆ ಪ್ರೀತಿಯಿಂದ ಆರೈಕೆ ಮಾಡಿ ಮೈ ನೇವರಿಸುತ್ತಾ ಬಂದ ಕಾರಣದಿಂದಲೇ ಪಡ್ಡೆಹುಲಿ ಈವತ್ತು ಕೊಬ್ಬಿ ಘರ್ಜಿಸುತ್ತಿದೆ. ಆದ್ದರಿಂದಲೇ ಪ್ರೇಕ್ಷಕರೆಲ್ಲ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.