ಬೆಂಗಳೂರು: ಸದ್ಯ ಕನ್ನಡ ಚಿತ್ರರಂಗದ ಹಿರಿಯ ನಟ ಅನ್ನೋ ಪಟ್ಟವನ್ನು ಅಲಂಕರಿಸಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಈಗೀಗ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿರುವ ಪೀಳಿಗೆಯವರು ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರ ಬಗ್ಗೆ ತಿಳಿದುಕೊಳ್ಳುತ್ತಾ ಬೆಳೆದ ಕಾರಣಕ್ಕೋ ಏನೋ ಸಾಕಷ್ಟು ಯುವನಟ, ನಟಿಯರು ಅವರ ಬಗ್ಗೆ ಅತಿಯಾದ ಪ್ರೀತಿಯ ಜೊತೆಗೆ ಭಯವನ್ನೂ ಹೊಂದಿರುತ್ತಾರೆ. ಇಷ್ಟು ದೊಡ್ಡ ನಟ, ತಂತ್ರಜ್ಞನ ಜೊತೆ ಹೇಗೆ ಕೆಲಸ ಮಾಡುವುದು ಅನ್ನೋ ಸಹಜ ಆತಂಕ ಅವರದ್ದಾಗಿರುತ್ತದೆ. ಈ ಹಿಂದೆ ಕೂಡಾ ಸಾಕಷ್ಟು ಯುವ ನಟರು ಮೊದಲ ಬಾರಿಗೆ ರವಿ ಸರ್ ಜೊತೆಗೆ ತೆರೆ ಹಂಚಿಕೊಂಡ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ಪಡ್ಡೆ ಹುಲಿ ಸಿನಿಮಾದ ನಾಯಕನಟ ಶ್ರೇಯಸ್ ಕೂಡಾ ರವಿಚಂದ್ರನ್ ಅವರ ಜೊತೆಗೆ ಮೊದಮೊದಲು ಸೆಟ್‍ನಲ್ಲಿ ಪಾಲ್ಗೊಂಡ ವಿಚಾರವನ್ನು ಹೇಳುತ್ತಿದ್ದರು.
‘ರವಿ ಸರ್ ಮುಂದೆ ಮೊದಮೊದಲು ನಟನೆ ಮಾಡುವುದು ಸಖತ್ ಕಷ್ಟ ಅನ್ನಿಸಿತ್ತು. ಅವರ ಮುಂದೆ ಮೇಕಪ್ ಹಾಕಿಸಿಕೊಳ್ಳೋದೂ ಮುಜುಗರ ಅನಿಸಿತ್ತು. ಅದಕ್ಕಾಗಿ ಟಚಪ್ ಹುಡುಗನನ್ನು ಕರೆದು ರವಿ ಸರ್ ಮುಂದೆ ಬಂದು ಟಚಪ್ ಮಾಡಬೇಡ. ನಾನೇ ಆ ಕಡೆ ಬಂದು ಟಚಪ್ ಮಾಡಿಸಿಕೊಳ್ತೀನಿ ಅಂದಿದ್ದೆ. ನಾನು ಅವರ ಮುಂದೆ ಆ್ಯಕ್ಟ್ ಮಾಡಲು ಕಷ್ಟ ಪಡುತ್ತಿದ್ದೀನಿ ಅನ್ನೋದು ಅವರಿಗೆ ಗೊತ್ತಾಗಲು ತುಂಬಾ ಹೊತ್ತೇನೂ ಬೇಕಾಗಿರಲಿಲ್ಲ. ನನ್ನಂತೆಯೇ ನಟಿಸಲು ಬಂದು ಅವರ ಮುಂದೆ ಒದ್ದಾಡೋರನ್ನು ಅವರು ಕೂಡಾ ಬೇಕಾದಷ್ಟು ಬಾರಿ ನೋಡಿರುತ್ತಾರೆ. ಹೀಗಾಗಿ ನನ್ನ ತಳಮಳವನ್ನು ಅವರೇ ಅರಿತುಕೊಂಡವರಂತೆ, ನನ್ನನ್ನು ಕರೆದುಕೊಂಡು ಹೋಗಿ ದೂರದಲ್ಲಿ ಕೂರಿಸಿಕೊಂಡು ಆತ್ಮೀಯವಾಗಿ ಮಾತಾಡಿಸಿ, ಒಳ್ಳೊಳ್ಳೆ ಟಿಪ್ಸ್ ಕೊಡೋ ಮೂಲಕ ರವಿ ಸರ್ ನನ್ನ ಭಯವನ್ನೆಲ್ಲಾ ಹೋಗಲಾಡಿಸಿದರು. ಆನಂತರ ಡೈರೆಕ್ಟರ್ ಗುರುದೇಶಪಾಂಡೆ ಅವರ ಆಜ್ಞೆಯಂತೆ ದೃಶ್ಯಗಳಿಗೆ ಹೇಗೆ ಬೇಕೋ ಹಾಗೆ ನಟಿಸಲು ಹೆಲ್ಪ್ ಆಯಿತು. ಈ ಸಿನಿಮಾವನ್ನು ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿದ್ದು, ರವಿಚಂದ್ರನ್ ಅವರ ಪ್ರೇಮಲೋಕದ ಥರಾ ಅದ್ಧೂರಿಯಾಗಿ ಮೂಡಿಬರಲು ಎಲ್ಲ ರೀತಿಯ ಸಹಾಯ ಮಾಡಿದ್ದಾರೆ’ ಅನ್ನೋದು ನಾಯಕನಟ ಶ್ರೇಯಸ್ ಮಾತು.
ಶ್ರೇಯಸ್ ಕನ್ನಡದ ಗಂಡುಗಲಿ ನಿರ್ಮಾಪಕ ಎಂದೇ ಹೆಸರಾದ ಕೆ. ಮಂಜು ಅವರ ಮಗ ಅನ್ನೋದು ನಿಮಗೆಲ್ಲಾ ಗೊತ್ತಿರುತ್ತದೆ. ಈ ಸಿನಿಮಾದಲ್ಲಿ ರವಿಚಂದ್ರನ್ ಶ್ರೇಯಸ್‍ಗೆ ತಂದೆಯಾಗಿ ನಟಿಸಿದ್ದಾರೆ. ಮಗ ದೊಡ್ಡ ಹಾಡುಗಾರನಾಗಬೇಕು ಎಂದು ಕನಸು ಕಂಡು ಅದಕ್ಕೆ ಪೂರಕವಾಗಿ ಸಹಕರಿಸುವ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ. ತೆರೆ ಹಿಂದೆ ಕೂಡಾ ಯುವ ನಟನನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮವಾಗಿ ನಟಿಸುವಂತೆ ಮಾಡಿರುವುದು ಅವರ ದೊಡ್ಡಗುಣ.