ಹಾಸನ: ಪೌರಕಾರ್ಮಿಕರ ಹೆಸರಿನಲ್ಲಿ ಪಾದ ಪೂಜೆ ಪಾಲಿಟಿಕ್ಸ್ ನಡೆದಿದ್ದು, ಒಂದೆಡೆ ಪಾದ ಮಾಡಿದ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತೊಂದೆಡೆ ಕಾಂಗ್ರೆಸ್ ಮುಖಂಡನಿಂದ ಪಾದಪೂಜೆ ಮಾಡಿದ್ದಾರೆ.
ಮೂರು ವರ್ಷಗಳ ಬಳಿಕ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಲವು ಬಗೆಯ ವಿಶಿಷ್ಟವಾದ ಗೌರಿ-ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಹಾಸನದಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಭಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪಾದ ಪೂಜೆ ಪಾಲಿಟಿಕ್ಸ್ ಜೋರಾಗಿದೆ.
ಹಾಸನ ನಗರದ ಕಲಾಭವನದ ಆವರಣದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ಪರಿಸರ ಪ್ರೇಮಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಶಾಸಕ ಪ್ರೀತಂಗೌಡ ಹಾಸನ ನಗರಸಭೆಯ ಇಪ್ಪತ್ತೈದು ಪೌರಕಾರ್ಮಿಕರ ಪಾದ ಪೂಜೆ ಮಾಡಿದರು. ಇವರ ಜೊತೆ ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್, ಬಿಜೆಪಿ ಮುಖಂಡರು ಪಾದ ಪೂಜೆ ನೆರವೇರಿಸಿದರು. ಅಲ್ಲದೇ ಪ್ರತಿಯೊಬ್ಬರಿಗೂ ಬಾಗಿನ ಹೆಸರಿನಲ್ಲಿ ಸೀರೆ, ಬಳೆ, ಕುಂಕುಮ, ಶರ್ಟ್ ಪೀಸ್ ವಿತರಿಸಲಾಯಿತು. ಇದನ್ನೂ ಓದಿ: ಮೋದಿ ಕಾರ್ಯಕ್ರಮ, ಕಟೀಲ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – 2 ಕೇಸ್ ದಾಖಲು
ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಅಕಾಂಕ್ಷಿ ಬನವಾಸೆ ರಂಗಸ್ವಾಮಿ ಅವರು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪೌರಕಾರ್ಮಿಕರ ಪಾದಪೂಜೆ ಮಾಡಿದರು. ತಟ್ಟೆಯಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು ನಂತರ ಬಾಗಿನ ನೀಡಿದರು. ಬಾಗಿನ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಸೆ.5 ರಂದು ಪಾಂಚಜನ್ಯ ಗಣಪತಿ ವಿಸರ್ಜನೆ ಕಾರ್ಯಕ್ರಮವಿದ್ದು, ಇದರ ಅಂಗವಾಗಿ ಶೋಭಯಾತ್ರೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ