ದಾವಣಗೆರೆ: ಪಂಚ ರಾಜ್ಯಗಳ ಫಲಿತಾಂಶ ಬಂದಾಗಿನಿಂದ ಮೋದಿ, ಅಮಿತ್ ಶಾ ನಿದ್ದೆ ಮಾಡುತ್ತಿಲ್ಲ. ವಾಮಮಾರ್ಗದ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಜರಾಯಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಕಿಡಿಕಾರಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿತ್ತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಬಿಜೆಪಿಯವರ ಆಪರೇಷನ್ ಕಮಲ ನಡೆಯೋದಿಲ್ಲ. ರಾಜ್ಯದ ಜನ ಕಾಂಗ್ರೆಸ್-ಜೆಡಿಎಸ್ ಪಕ್ಷದ ಪರವಾಗಿದ್ದಾರೆ. ಮೋದಿ ಹಾಗೂ ಅಮಿತ್ ಶಾಗೆ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ ಇದೆ. ಆದರಿಂದ ಈ ರೀತಿ ಆಪರೇಷನ್ ಕಮಲ ಅಂತ ತಂತ್ರ ಮಾಡುತ್ತಿದ್ದಾರೆ. ಯಾವ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದಿದ್ದಾರೆ.
ಸುಮ್ಮನೆ ಬಿಜೆಪಿಯವರು ಕಳೆದ 6 ತಿಂಗಳಿಂದ ಇದೇ ರೀತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯಲು ನೀರು ಸಹ ಇಲ್ಲದೆ ಜನರು ಒದ್ದಾಡುತ್ತಿದ್ದಾರೆ. ಆದ್ರೆ ಬಿಜೆಪಿ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿ, ನನಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಯಾರು ಸಹ ಅಸಮಾಧಾನಗೊಂಡಿಲ್ಲ. ಅದರಲ್ಲೂ ಬಳ್ಳಾರಿಯಲ್ಲಿ ಯಾವ ಶಾಸಕರು ಸಹ ಬೇಸರಗೊಂಡಿಲ್ಲ. ಅಲ್ಲದೇ ಪಕ್ಷದಿಂದ ನಮಗೆ ಬುಲಾವ್ ಬಂದಿಲ್ಲ. ಆರಾಮಾಗಿ ಇಲ್ಲೇ ಇದ್ದೇನೆ ನೋಡಿ ಎಂದು ಪಿ.ಟಿ ಪರಮೇಶ್ವರ್ ನಾಯ್ಕ್ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv