Connect with us

Latest

ಮಾಜಿ ಹಣಕಾಸು ಸಚಿವ ಚಿದಂಬರಂ, ಪುತ್ರ ಕಾರ್ತಿ ಮನೆ ಮೇಲೆ ಸಿಬಿಐ ದಾಳಿ

Published

on

– ಸರ್ಕಾರ ನನ್ನ ಮಗನನ್ನ ಟಾರ್ಗೆಟ್ ಮಾಡ್ತಿದೆ ಎಂದ ಚಿದಂಬರಂ

ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ.

ಚೆನ್ನೈನಲ್ಲಿರುವ ಪಿ. ಚಿದಂಬರಂ ಅವರ ಮನೆ ಹಾಗೂ ಕಾರೈಕುಡಿಯಲ್ಲಿರುವ ಕಾರ್ತಿ ಅವರ ಮನೆ ಸೇರಿದಂತೆ ಒಟ್ಟು 14 ಕಡೆ ಸಿಬಿಐ ದಾಳಿ ನಡೆಸಿದೆ. ಕಾರ್ತಿ ಚಿದಂಬರಂ ಮೇಲೆ ಅಕ್ರಮ ಹಣ ಸಂಪಾದನೆಯ ಆರೋಪವಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಏನಿದು ಪ್ರಕರಣ?: 2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರ್‍ಗಳನ್ನ ನೀಡಿತ್ತು. ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನ ಪಾವತಿಸಿತ್ತು. ಅಲ್ಲದೆ 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.

ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್‍ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್‍ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್‍ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್‍ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂ. ನೀಡಿದೆ ಎನ್ನುವ ಆರೋಪ ಕೇಳಿ ಬಂಧೀತ್ತು.

ಈ ಹಿಂದೆ ಐಎನ್‍ಎಕ್ಸ್ ಮೀಡಿಯಾದ ಮಲೀಕರಾಗಿದ್ದ ಪೀಟರ್ ಮುಖರ್ಜಿ ಮತ್ತು ಪತ್ನಿ ಇಂದ್ರಾಣಿ ಮುಖರ್ಜಿ ಸದ್ಯ ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಕೊಲೆ ಪ್ರಕರಣದ ತನಿಖೆ ವೇಳೆ ಮುಖರ್ಜಿ ಅವರ ಹಣಕಾಸು ವ್ಯವಹಾರಗಳನ್ನ ಪರೀಶಿಲನೆಗೆ ಒಳಪಡಿಸಿದಾಗ ಐಎನ್‍ಎಕ್ಸ್ ಮೀಡಿಯಾ ಡೀಲ್ ಬಗ್ಗೆ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. 2009ರಲ್ಲಿ ಮುಖರ್ಜಿ ಐಎನ್‍ಎಕ್ಸ್ ಮೀಡಿಯಾದಿಂದ ಹೊರಬಂದಿದ್ದರು ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚಿದಂಬರಂ, ಸರ್ಕಾರ ಸಿಬಿಐ ಹಾಗೂ ಇತರೆ ಸಂಸ್ಥೆಗಳಗಳನ್ನ ಬಳಸಿಕೊಂಡು ನನ್ನ ಮಗ ಹಾಗೂ ಆತನ ಸ್ನೇಹಿತರನ್ನೇ ಟಾರ್ಗೆಟ್ ಮಾಡುತ್ತಿದೆ. ನನ್ನನ್ನು ಸುಮ್ಮನಾಗಿಸಬೇಕು, ನನ್ನ ಬರವಣಿಗೆಯನ್ನ ನಿಲ್ಲಿಸಬೇಕು ಎಂಬುದೇ ಸರ್ಕಾರದ ಉದ್ದೇಶ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಅಂಕಣಕಾರರು ಹಾಗೂ ಎನ್‍ಜಿಓಗಳ ವಿಷಯದಲ್ಲೂ ಸರ್ಕಾರ ಇದೇ ಪ್ರಯತ್ನ ಮಾಡಿದೆ. ನಾನು ಹೇಳೋದು ಇಷ್ಟೇ, ನಾನು ಮಾತನಾಡುವುದು ಹಾಗೂ ಬರೆಯುವುದನ್ನ ಮುಂದುವರೆಸುತ್ತೇನೆ ಎಂದಿದ್ದಾರೆ.