ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಸಚಿವ ಚಿದಂಬರಂ ಅವರ ದೇಹದ ತೂಕ ಭಾರೀ ಇಳಿಕೆಯಾಗಿದೆ ಎಂದು ಕುಟುಂಬ ಬೇಸರ ವ್ಯಕ್ತಪಡಿಸಿದೆ.
ಪಿ.ಚಿದಂಬರಂ ಅವರು ಕ್ರೋನ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ತಿಹಾರ್ ಜೈಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆ ತೃಪ್ತಿಕರವಾಗಿಲ್ಲ, ಖಾಯಿಲೆ ಉಲ್ಬಣಗೊಂಡಿದ್ದರಿಂದ ಅವರ ತೂಕ ಕಡಿಮೆಯಾಗುತ್ತಲೇ ಇದೆ. ಚಿದಂಬರಂ ಬಂಧನಕ್ಕೊಳಗಾದ ನಂತರ ಸುಮಾರು 8-9 ಕೆ.ಜಿ.ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಕುಟುಂಬದವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Advertisement
ಜೈಲಿನಲ್ಲಿ ಅವರಿಗೆ ನೀಡುತ್ತಿರುವ ಚಿಕಿತ್ಸೆ ನಮಗೆ ತೃಪ್ತಿ ತಂದಿಲ್ಲ. ಖಾಯಿಲೆಯಿಂದ ಅವರು ತುಂಬಾ ಬಳಲುತ್ತಿದ್ದಾರೆ. ಕೂಡಲೇ ಅವರಿಗೆ ಹೈದರಾಬಾದ್‍ನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಾಗೇಶ್ವರ ರೆಡ್ಡಿ ಅವರ ಬಳಿ ಚಿಕಿತ್ಸೆ ಕೊಡಿಸಬೇಕಿದೆ. ಚಿದಂಬರ್ ಆರೋಗ್ಯದ ಕುರಿತು ಅವರಿಗೆ ಮಾತ್ರ ತಿಳಿದಿದೆ, ರೆಡ್ಡಿ 2016 ರಿಂದಲೂ ಚಿದಂಬರಂ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Advertisement
Advertisement
ಐಎನ್‍ಎಕ್ಸ್ ಮೀಡಿಯಾದ ಭ್ರಷ್ಟಾಚಾರ ಪ್ರಕರಣದ ಕುರಿತ ಪ್ರಕರಣದಲ್ಲಿ ಚಿದಂಬರಂ ಅವರನ್ನು ಆಗಸ್ಟ್ 21ರಂದು ಸಿಬಿಐ ಬಂಧಿಸಿತ್ತು. ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದ ದೆಹಲಿಯ ಕೋರ್ಟ್ ನ.27ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
Advertisement
ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ಲಕ್ಷ ಬಾಂಡ್ ಜೊತೆಗೆ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ಸಲ್ಲಿಸಬೇಕೆಂದು ಆದೇಶಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಮತ್ತೊಂದು ಪ್ರಕರಣದಲ್ಲಿ ಪಿ.ಚಿದಂಬರಂ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಲ್ಲೇ ಮುಂದುವರಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ದೆಹಲಿ ನ್ಯಾಯಾಲಯವು ಪಿ.ಚಿದಂಬರಂ ಅವರನ್ನು ನ.27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಚಿದಂಬರಂ ಅವರನ್ನು ಇಡಿ ಪ್ರಶ್ನಿಸಲು ಅವಕಾಶ ನೀಡಿದ್ದಾರೆ. ಜೊತೆಗೆ ಯಾವುದೇ ವೈದ್ಯಕೀಯ ತೊಂದರೆಗಳಿದ್ದಲ್ಲಿ ತಕ್ಷಣ ಅವರನ್ನು ಏಮ್ಸ್ ಗೆ ಕರೆದೊಯ್ಯಬೇಕೆಂದು ಆದೇಶಿಸಿದ್ದರು.
ತಿಹಾರ್ ಜೈಲಿನಲ್ಲಿರುವ ಆರೋಪಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಮಾನ್ಯವಾಗಿ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ನಾಯಕ ಚಿದಂಬರಂ ಪ್ರಕರಣದಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ಬಳಿಕ ಕಚೇರಿಗೆ ಕರೆತಂದಿದ್ದರು.
ಏನಿದು ಪ್ರಕರಣ?
ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.