Connect with us

Latest

ದೆಹಲಿ ಬಾರ್‌ನಲ್ಲಿ ಆಕ್ಸಿಜನ್ ಲಭ್ಯ- ಹಣ ಕೊಟ್ಟು ಉಸಿರಾಡ್ತಿರುವ ಜನ

Published

on

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಶುದ್ಧಗಾಳಿಯ ಕೊರತೆಯಿಂದ ಅಲ್ಲಿನ ಜನರು ಪರದಾಡುತ್ತಿದ್ದಾರೆ. ವಾಯುಮಾಲಿನ್ಯ ಏರಿಕೆಯಿಂದ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಇಳಿಕೆಯಾಗಿದೆ. ಆದ್ದರಿಂದ ಜನರಿಗೆ ಶುದ್ಧ ಆಮ್ಲಜನಕ ಒದಗಿಸಲು ‘ಆಕ್ಸಿ ಪ್ಯೂರ್’ ಬಾರ್ ಆರಂಭಗೊಂಡಿದೆ.

ಪರಿಸರದಲ್ಲಿ ಉಚಿತವಾಗಿ ಸಿಗುತ್ತಿದ್ದ ಶುದ್ಧ ಆಮ್ಲಜನಕವನ್ನು ಈಗ ಹಣ ಕೊಟ್ಟು ಪಡೆಯುವ ಸ್ಥಿತಿ ದೆಹಲಿ ಮಂದಿಗೆ ಬಂದಿದೆ. ವಾಯುಮಾಲಿನ್ಯದಿಂದ ದೆಹಲಿ ಮಂದಿ ತತ್ತರಿಸಿ ಹೋಗಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡು ‘ಆಕ್ಸಿ ಪ್ಯೂರ್’ ಹೆಸರಿನ ಬಾರ್ ದೆಹಲಿಯಲ್ಲಿ ಆರಂಭಗೊಂಡಿದೆ. ಬಾರ್ ಅಂದಾಕ್ಷಣ ಕೇವಲ ಮದ್ಯ ಸಿಗುತ್ತೆ ಅಂದುಕೊಳ್ಳಬೇಡಿ. ಅಸಲಿಗೆ ಇದು ಮದ್ಯದ ಬಾರ್ ಅಲ್ಲ ಶುದ್ಧ ಆಮ್ಲಜನಕ ಮಾರಾಟ ಮಾಡುವ ಬಾರ್. ಹೌದು. ಈ ಆಕ್ಸಿ ಪ್ಯೂರ್ ಬಾರ್‌ನಲ್ಲಿ ಗ್ರಾಹಕರು ಶುದ್ಧ ಆಮ್ಲಜನಕ ಸೇವಿಸಬಹುದಾಗಿದೆ. ಅದರಲ್ಲೂ ಏಳು ವಿವಿಧ ಅರೋಮಗಳಲ್ಲಿ ಆಮ್ಲಜನಕ ಇಲ್ಲಿ ಲಭ್ಯವಿದೆ.

ಲೆಮೊನ್‍ಗ್ರಾಸ್, ಆರೆಂಜ್, ಪೆಪ್ಪರ್‍ಮಿಂಟ್, ಲ್ಯಾವೆಂಡರ್ ಹೀಗೆ ವಿವಿಧ ಆಕರ್ಷಕ ಅರೋಮಗಳ ಆಮ್ಲಜನಕ ಇಲ್ಲಿ ಲಭ್ಯವಿದೆ. ಆಕ್ಸಿ ಪ್ಯೂರ್ ಬಾರ್‌ನಲ್ಲಿ ಗ್ರಾಹಕರಿಗೆ ಕ್ಯಾನ್ ಮೂಲಕ ಆಮ್ಲಜನಕ ಒದಗಿಸಲಾಗುತ್ತದೆ. ಅದನ್ನು ಬೇಕಾದಲ್ಲಿ ಗ್ರಾಹಕರು ಕೊಂಡೊಯ್ಯಬಹುದಾಗಿದೆ.

ಪೋರ್ಟೆಬಲ್ ಕ್ಯಾನ್‍ಗಳಲ್ಲಿ ಆಮ್ಲಜನಕವನ್ನು ಗ್ರಾಹಕರು ಟೇಕ್ ಅವೇ ಡೆಲಿವರಿ ಪಡೆದುಕೊಳ್ಳಲು ಕೂಡ ಸೌಲಭ್ಯ ನೀಡಲಾಗಿದೆ. ದೆಹಲಿಯ ಹವಾಮಾನ ಗುಣಮಟ್ಟ ಕ್ಷೀಣಿಸಿರುವುದರಿಂದ ಶುದ್ಧಗಾಳಿಯ ಕೊರತೆಯಿದೆ. ಹೀಗಾಗಿ ಇಂತಹ ಹೊಸ ಯೋಜನೆಗೆ ಚಾಲನೆ ದೊರೆತಿದೆ. ಆಕ್ಯಿ ಪ್ಯೂರ್ ಬಾರ್‌ನಲ್ಲಿ 15 ನಿಮಿಷ ಶುದ್ಧ ಆಮ್ಲಜನಕವನ್ನು ಪಡೆಯಬೇಕಾದರೆ 299 ರೂಪಾಯಿ ನೀಡಬೇಕು. ವಿವಿಧ ಅರೋಮಗಳಿಗೆ ಇಲ್ಲಿ ಬೇರೆ ಬೇರೆ ಬೆಲೆ ನಿಗದಿಯಾಗಿದೆ.

ಈ ಬಗ್ಗೆ ಆಕ್ಸಿ ಪ್ಯೂರ್ ಸಿಬ್ಬಂದಿ ಮಾತನಾಡಿ, ನಮ್ಮಲ್ಲಿಗೆ ದಿನಕ್ಕೆ 10ರಿಂದ 15 ಮಂದಿ ಗ್ರಾಹಕರು ಬರುತ್ತಾರೆ. ಅವರಿಗೆ ನಾವು ಪೋರ್ಟೆಬಲ್ ಕ್ಯಾನ್‍ಗಳಲ್ಲಿ ಆಮ್ಲಜನಕವನ್ನು ಕೊಂಡೊಯ್ಯುವ ಸೌಲಭ್ಯವನ್ನೂ ನೀಡುತ್ತಿದ್ದೇವೆ ಎಂದಿದ್ದಾರೆ.

ಈ ಆಮ್ಲಜನಕವನ್ನು ಗ್ರಾಹಕರು ಪಡೆಯುವುದರಿಂದ ಅವರಿಗೆ ಹಲವು ಆರೋಗ್ಯಕರ ಲಾಭಗಳು ಕೂಡ ದೊರೆಯುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ ಜೊತೆಗೆ ಮನಸ್ಸಿಗೆ ಶಾಂತಿ ಒದಗಿಸುತ್ತದೆ. ನಿದ್ರಾಹೀನತೆಯನ್ನು ಕಡಿಮೆ ಮಾಡಿ, ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಅಷ್ಟೇ ಅಲ್ಲದೆ ಖಿನ್ನತೆಯನ್ನು ಗುಣಪಡಿಸುತ್ತದೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.

ಗುರುವಾರ ದೆಹಲಿ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ನಗರವನ್ನು ಕಾಡುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಿ ಎಂದು ಖಡಕ್ ಆದೇಶ ನೀಡಿದೆ.

Click to comment

Leave a Reply

Your email address will not be published. Required fields are marked *