ಮಡಿಕೇರಿ: ಪಡೆದ ಸಾಲದ ಹಣ ಹಿಂದಿರುಗಿಸದ ತನ್ನ ಕಾರ್ಮಿಕನ ವಿರುದ್ಧ ಅಮಾನವೀಯವಾಗಿ ವರ್ತಿಸಿರೋ ಮಾಲೀಕನೋರ್ವ ಕಾರ್ಮಿಕನನ್ನು ಕಟ್ಟಿಹಾಕಿ ನಾಯಿಯಿಂದ ಕಚ್ಚಿಸಿರೋ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯ ಹರೀಶ್ ಎಂಬವರ ಮೇಲೆ ಮಾಲೀಕ ಕಿಶನ್ ನಾಯಿ ದಾಳಿ ನಡೆಸಿದ್ದಾರೆ.
Advertisement
ಏನಿದು ಘಟನೆ?: ಕಳೆದ ಒಂದೂವರೆ ವರ್ಷಗಳಿಂದ ಹರೀಶ್ ರಾಜಾಪುರ ಗ್ರಾಮದ ಕಿಶನ್ ಎಂಬವರ ಮನೆಯಲ್ಲಿ ಕೂಲಿ ಕೆಲಸಮಾಡಿಕೊಂಡಿದ್ದರು. ತನ್ನ ಮಾಲೀಕನಿಂದ 4 ಸಾವಿರ ಹಣ ಸಾಲಪಡೆದಿದ್ದ ಹರೀಶ್ ಅದನ್ನು ವಾಪಸ್ ನೀಡದೆ ಕೆಲಸಕ್ಕೂ ಹೋಗದೆ ಕದ್ದು ಮುಚ್ಚಿ ಓಡಾಡುತ್ತಿದ್ದನಂತೆ. ಹಣ ನೀಡದೆ ಕೆಲಸಕ್ಕೂ ಬಾರದೆ ಇದ್ದ ಕಾರ್ಮಿಕನ ವಿರುದ್ಧ ತೀರಾ ಸಿಟ್ಟಿಗೆದ್ದಿದ್ದ ಮಾಲೀಕ ಕಿಶನ್ ಅಗಸ್ಟ್ 29ರಂದು ಬಾಳೆಲೆಯಲ್ಲಿ ಆತನನ್ನು ಕಂಡವನೆ ನೇರವಾಗಿ ತನ್ನ ಜೀಪಲ್ಲಿ ಕೂರಿಸಿಕೊಂಡು ಹೋಗಿ ಮನೆ ಬಳಿ ಅಮಾನವೀಯತೆ ಮೆರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
Advertisement
Advertisement
ಕಾರ್ಮಿಕ ಹರೀಶ್ ನನ್ನು ಕಟ್ಟಿಹಾಕಿ ತನ್ನ ಶೆಡ್ ನೊಳಗೆ ಕೂಡಿ ಹಾಕಿ ನಾಯಿಗಳನ್ನ ಛೂ ಬಿಟ್ಟು ಕಚ್ಚಿಸಿದ್ದಾನೆ. ಎರಡು ಮೂರು ನಾಯಿಗಳ ದಾಳಿಯಿಂದ ತಲೆ, ದೇಹ, ಕೈಕಾಲುಗಳು ತೀವ್ರ ಗಾಯಗಳಾಗರೋ ಹರೀಶ್ ಇದೀಗ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹರೀಶ್ ಆರೋಪಿಸಿದ್ದಾರೆ. ಆದ್ರೆ ಕಿಶನ್, `ತನಗೆ ಹರೀಶ್ 20 ಸಾವಿರ ಹಣ ಕೊಡೋಕೆ ಬಾಕಿಯಿದೆ. ಇಷ್ಟಿದ್ದರೂ ಆತ ಕದ್ದು ಮುಚ್ಚಿ ಓಡಾಡುತ್ತಿದ್ದ’ ಎಂದು ಪೊಲೀಸರಲ್ಲಿ ಹೇಳಿದ್ದಾರೆ.
Advertisement
ಅದೇನೇ ಇರಲಿ ಮಾಲೀಕನ ಇಂತಹ ಅಮಾನವೀಯ ವರ್ತನೆ ಬಡ ಕಾರ್ಮಿಕನನ್ನು ಕಂಗಾಲುಗೊಳಿಸಿದ್ದು, ಇಷ್ಟೆಲ್ಲಾ ಆದ್ರೂ ನೊಂದ ಕಾರ್ಮಿಕನ ನೆರವಿಗೆ ಯಾವೊಂದು ಇಲಾಖೆಯೂ ಬಂದಿಲ್ಲ, ಆತನ ನೋವು ಕೇಳಿಲ್ಲ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರಷ್ಟೆ ಎಂದು ದಲಿತ ಸಂಘರ್ಷ ಸಮಿತಿ ಪ್ರಮುಖರು ಆರೋಪಿಸುತ್ತಿದ್ದು, ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.
ಸದ್ಯ ಮಾಲೀಕ ಕಿಶನ್ ವಿರುದ್ಧ ಅಪಹರಣ, ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕಿಶನ್ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.