– ಯಾರೀ ಸಾಗರೋತ್ತರ ಭಾರತೀಯ ಸಮುದಾಯ?
– ಒಸಿಐ ಕಾರ್ಡ್ ಇದ್ರೆ ಭಾರತದಲ್ಲಿ ಸಿಗುವ ಸೌಲಭ್ಯಗಳೇನು?
ದೇಶದಲ್ಲಿ ಸಾಗರೋತ್ತರ ಭಾರತೀಯ ನಾಗರಿಕರ (OCI) ವಿಚಾರ ಚರ್ಚೆಯಲ್ಲಿದೆ. ಒಸಿಐ ಕಾರ್ಡ್‌ಗಳನ್ನು ಹೊಂದಿರುವವರನ್ನು ವಿದೇಶಿಗರು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ವದಂತಿ ದೇಶದೆಲ್ಲೆಡೆ ಚರ್ಚೆ ಹುಟ್ಟುಹಾಕಿತು. ವದಂತಿ ಹರಡಿದ ಬೆನ್ನಲ್ಲೇ ಸಾಗರೋತ್ತರ ಭಾರತೀಯ ಸಮುದಾಯವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ವದಂತಿಗಳನ್ನು ವಿದೇಶಾಂಗ ಇಲಾಖೆ ಅಲ್ಲಗಳೆಯಿತು. ಅಂತಹ ಯಾವುದೇ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು.
Advertisement
ಅಷ್ಟಕ್ಕೂ ಒಸಿಐ ಕಾರ್ಡ್ ಎಂದರೇನು? ಈ ಕಾರ್ಡ್‌ಗಳ ಅನುಕೂಲತೆಗಳೇನು? ಒಸಿಐಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ನಿಯಮಗಳೇನು? ಇದು ಒಸಿಐ ನಿಯಮಗಳಿಗೆ ಮಾಡಿದ ಮೊದಲ ಬದಲಾವಣೆಯೇ?
Advertisement
ಏನಿದು ಒಸಿಐ ಕಾರ್ಡ್?
2005 ರ ಆಗಸ್ಟ್‌ನಲ್ಲಿ ಇದನ್ನು ಪರಿಚಯಿಸಲಾಯಿತು. ಈ ಕಾರ್ಡ್‌ಗಳನ್ನು ಸಾಗರೋತ್ತರ ಭಾರತೀಯ ಸಮುದಾಯದವರಿಗೆ ನೀಡಲಾಗುತ್ತದೆ. ಭಾರತೀಯ ಮೂಲದವರಾಗಿದ್ದು, ವಿದೇಶಗಳಲ್ಲಿ ನೆಲೆಸಿರುವವರಿಗೆ ದ್ವಿಪೌರತ್ವ ಕಲ್ಪಿಸುವುದೇ ಈ ಕಾರ್ಡ್‌ಗಳ ಮುಖ್ಯ ಉದ್ದೇಶವಾಗಿದೆ. 1950ರ ಜನವರಿ 26 ರಂದು ಭಾರತದ ಪ್ರಜೆಗಳಾಗಿದ್ದ ಅಥವಾ ಆ ದಿನಾಂಕದಂದು ಭಾರತದ ಪ್ರಜೆಗಳಾಗಲು ಅರ್ಹರಾಗಿದ್ದ ಭಾರತೀಯ ಮೂಲದ ಎಲ್ಲಾ ವ್ಯಕ್ತಿಗಳಿಗೆ ಒಸಿಐ ಯೋಜನೆಯು ನೋಂದಣಿಗೆ ಅವಕಾಶ ಕಲ್ಪಿಸಿತ್ತು. 2005ರ ಸಂದರ್ಭದಲ್ಲಿ ಸಂಸತ್ ಅಧಿವೇಶನದಲ್ಲಿ ಎಲ್.ಕೆ.ಅಡ್ವಾಣಿ ಶಾಸನ ಮಂಡಿಸಿದ್ದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ವಲಸೆಗಾರರಿಗೆ ದ್ವಿಪೌರತ್ವ ಪರಿಚಯಿಸುವುದೇ ಮಸೂದೆಯ ಮುಖ್ಯ ಉದ್ದೇಶ ಎಂದಿದ್ದರು.
Advertisement
ಒಸಿಐ ಕಾರ್ಡ್ ಹೊಂದಿರುವವರು, ಮೂಲಭೂತವಾಗಿ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಭಾರತಕ್ಕೆ ಭೇಟಿ ನೀಡಲು ಬಹು ಉದ್ದೇಶದ ಜೀವಿತಾವಧಿಯ ವೀಸಾವನ್ನು ಪಡೆಯುತ್ತಾರೆ. ದೇಶದಲ್ಲಿ ಯಾವುದೇ ಅವಧಿಯವರೆಗೆ ಸ್ಥಳೀಯ ಪೊಲೀಸ್ ಪ್ರಾಧಿಕಾರದಲ್ಲಿ ನೋಂದಣಿಯಿಂದ ವಿನಾಯಿತಿ ಪಡೆದಿರುತ್ತಾರೆ. ಆರಂಭದಲ್ಲಿ ಒಸಿಐ ಕಾರ್ಡ್ ಹೊಂದಿರುವವರು ಕೃಷಿ ಅಥವಾ ತೋಟದ ಆಸ್ತಿಗಳ ಸ್ವಾಧೀನಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ಆರ್ಥಿಕ, ಹಣಕಾಸು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಂಬಂಧ ಅನಿವಾಸಿ ಭಾರತೀಯರೊಂದಿಗೆ (ಎನ್‌ಆರ್‌ಐ) ಸಾಮಾನ್ಯ ಸಮಾನತೆಗೆ ಅರ್ಹರಾಗಿದ್ದರು. ಎನ್‌ಆರ್‌ಐಗಳು ವಿದೇಶಿ ರಾಜ್ಯದ ಖಾಯಂ ನಿವಾಸಿಗಳಾಗಿರುವ ಭಾರತೀಯ ನಾಗರಿಕರು.
Advertisement
ಕಾರ್ಡ್‌ನಿಂದ ಸಿಗುವ ಅನುಕೂಲಗಳೇನು?
ಒಸಿಐ ಕಾರ್ಡ್‌ಗಳನ್ನು ಹೊಂದಿರುವವರಿಗೆ, ಅದರಲ್ಲೂ ಮುಖ್ಯವಾಗಿ ವಿದೇಶಿಗಳ ಪಾಸ್‌ಪೋರ್ಟ್ ಹೊಂದಿರುವವರಿಗೆ ಭಾರತಕ್ಕೆ ಹಲವು ಬಾರಿ ಬಂದು ಹೋಗಲು ವೀಸಾ ಸಿಗುತ್ತದೆ. ಆಜೀವ ಪರ್ಯಂತ ಈ ಸೌಲಭ್ಯ ಅವರಿಗೆ ಸಿಗುತ್ತದೆ. ಇಲ್ಲದಿದ್ದರೆ, ಭಾರತದಲ್ಲಿ ವೀಸಾ ಅವಧಿ ಮೀರಿದ ಬಳಿಕ ತುಂಬಾ ದಿನ ಉಳಿದಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ. ತಾವು ಯಾವ ಕಾರಣಕ್ಕಾಗಿ ಉಳಿದಿದ್ದೇವೆ, ಎಷ್ಟು ದಿನ ಉಳಿದುಕೊಳ್ಳುತ್ತೇವೆ ಎಂಬ ವಿಚಾರವಾಗಿ ಘೋಷಣಾ ಪತ್ರ ಸಲ್ಲಿಸಬೇಕಾಗುತ್ತದೆ. ಒಸಿಐ ಕಾರ್ಡ್ ಇದ್ದರೆ ಈ ಯಾವ ಪ್ರಮೇಯವೂ ಬರುವುದಿಲ್ಲ.
ಒಸಿಐಗಳಿಗೆ ಸಂಬಂಧಿಸಿದ ಈಚಿನ ನಿಯಮಗಳೇನು?
2021ರ ಮಾರ್ಚ್ 4 ರಂದು ಗೃಹ ವ್ಯವಹಾರಗಳ ಸಚಿವಾಲಯವು ಒಸಿಐ ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು. ಈ ನಿಯಮಗಳು ಒಸಿಐ ಕಾರ್ಡ್ ಹೊಂದಿರುವವರು ಭಾರತದಲ್ಲಿನ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಲು ಅನುಮತಿಯನ್ನು ಪಡೆಯಬೇಕು. ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳಿಗೂ ಇದೇ ನಿರ್ಬಂಧಗಳು ಅನ್ವಯಿಸುತ್ತವೆ. ಯಾವುದೇ ಸಂಶೋಧನೆ ಕೈಗೊಳ್ಳಲು, ಯಾವುದೇ ಮಿಷನರಿ ಅಥವಾ ತಬ್ಲಿಘಿ ಅಥವಾ ಪತ್ರಿಕೋದ್ಯಮ ಕಾರಣಕ್ಕಾಗಿ ಭಾರತದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಲು ಒಸಿಐಗಳಿಗೆ ವಿಶೇಷ ಪರವಾನಗಿಯನ್ನು ಪಡೆಯುವ ಅವಶ್ಯಕತೆ ಸೇರಿದಂತೆ ಹೊಸ ನಿರ್ಬಂಧಗಳ ಸರಣಿಯನ್ನು ಪರಿಚಯಿಸಲಾಯಿತು.
ಇದು ಒಸಿಐ ನಿಯಮಗಳಿಗೆ ಮಾಡಿದ ಮೊದಲ ಬದಲಾವಣೆಯೇ?
ಇಲ್ಲ, 2021 ರ ಅಧಿಸೂಚನೆಯು 2005ರ ಏಪ್ರಿಲ್ 11, 2007ರ ಜನವರಿ 5 ಮತ್ತು 2009ರ ಜನವರಿ 5 ರಂದು ನೀಡಲಾದ ಮೂರು ಹಿಂದಿನ ಅಧಿಸೂಚನೆಗಳನ್ನು ರದ್ದುಗೊಳಿಸಿತು. ಇದು ಒಸಿಐಗಳ ಹಕ್ಕುಗಳನ್ನು ನಿಗದಿಪಡಿಸಿತು. 2005ರ ಏಪ್ರಿಲ್ 11 ರಂದು ಹೊರಡಿಸಲಾದ ಆದೇಶವು ಒಸಿಐಗಳಿಗೆ ಜೀವಿತಾವಧಿಯ ವೀಸಾಗಳನ್ನು ಸಕ್ರಿಯಗೊಳಿಸಿತು. ಯಾವುದೇ ಅವಧಿಯ ವಾಸ್ತವ್ಯಕ್ಕಾಗಿ ಎಫ್‌ಆರ್‌ಆರ್‌ಒ ನೋಂದಣಿಯಿಂದ ವಿನಾಯಿತಿ ನೀಡಲಾಯಿತು.
2009ರ ಜನವರಿಯಲ್ಲಿ ಒಂದಷ್ಟು ತಿದ್ದುಪಡಿ ಮಾಡಲಾಯಿತು. ಸ್ಮಾರಕಗಳು, ಐತಿಹಾಸಿಕ ಸ್ಥಳಗಳು, ವಸ್ತುಸಂಗ್ರಹಾಲಯಗಳಲ್ಲಿ ಪ್ರವೇಶ ಶುಲ್ಕ ಮತ್ತು ವೈದ್ಯರು, ಸಿಎಗಳು, ವಕೀಲರು ಹಾಗೂ ವಾಸ್ತುಶಿಲ್ಪಿಗಳಂತಹ ವೃತ್ತಿಗಳಿಗೆ ಸಂಬಂಧಿಸಿದಂತೆ ಎನ್‌ಆರ್‌ಐಗಳಂತೆಯೇ ಒಸಿಐಗಳಿಗೂ ಸಮಾನ ಅವಕಾಶ ಕಲ್ಪಿಸಲು ತಿದ್ದುಪಡಿ ಮಾಡಲಾಯಿತು.
ಯಾರು ಒಸಿಐ ಆಗಲು ಸಾಧ್ಯವಿಲ್ಲ?
ಅರ್ಜಿದಾರನು ಅವನ/ಅವಳ ಪೋಷಕರು ಅಥವಾ ಅಜ್ಜ/ಅಜ್ಜಿಯರು ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಪ್ರಜೆಯಾಗಿದ್ದರೆ ಒಸಿಐ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ. ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ವಿದೇಶಿ ಸೇನಾ ಸಿಬ್ಬಂದಿಯೂ ಒಸಿಐ ಕಾರ್ಡ್‌ಗೆ ಅರ್ಹರಾಗಿರುವುದಿಲ್ಲ. ಆದರೆ, ಭಾರತದ ಪ್ರಜೆಯ ವಿದೇಶಿ ಮೂಲದ ಸಂಗಾತಿ ಅಥವಾ ಒಸಿಐ ಕಾರ್ಡ್ ಇರುವವರ ವಿದೇಶಿ ಮೂಲದ ಸಂಗಾತಿಯು ಮದುವೆಯನ್ನು ನೋಂದಾಯಿಸಿ, ಎರಡು ವರ್ಷ ದಾಟಿದ್ದರೆ ಒಸಿಐ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಒಸಿಐ ಕಾರ್ಡ್ ಹೊಂದಿರುವವರಿಗೆ ಯಾವ ಹಕ್ಕಿರಲ್ಲ?
ಒಸಿಐ ಕಾರ್ಡ್ ಹೊಂದಿರುವವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ವಿಧಾನಸಭೆ, ವಿಧಾನ ಪರಿಷತ್ ಅಥವಾ ಸಂಸತ್ತಿನ ಸದಸ್ಯರಾಗಲು, ರಾಷ್ಟ್ರಪತಿ, ಉಪಾಧ್ಯಕ್ಷ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನ್ಯಾಯಾಧೀಶರಂತಹ ಭಾರತೀಯ ಸಾಂವಿಧಾನಿಕ ಹುದ್ದೆಗಳನ್ನು ಹೊಂದಲು ಅವಕಾಶ ಇರಲ್ಲ. ಸಾಮಾನ್ಯವಾಗಿ ಸರ್ಕಾರಿ ಉದ್ಯೋಗವನ್ನು ಹೊಂದಲು ಕೂಡ ಸಾಧ್ಯವಿಲ್ಲ.
ಸರ್ಕಾರಿ ದಾಖಲೆಗಳು ಏನು ಹೇಳುತ್ತವೆ?
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, 2023ರ ಹೊತ್ತಿಗೆ ಭಾರತ ಸರ್ಕಾರದಿಂದ 129 ದೇಶಗಳಲ್ಲಿರುವ 45 ಲಕ್ಷ ಸಾಗರೋತ್ತರ ಭಾರತೀಯ ನಾಗರಿಕರು ಒಸಿಐ ಕಾರ್ಡ್‌ಗಳನ್ನು ನೀಡಲಾಗಿದೆ. ಈ ಕಾರ್ಡ್‌ಗಳನ್ನು ಹೆಚ್ಚಾಗಿ ಪಡೆದಿರುವುದು ಅಮೆರಿಕದಲ್ಲಿರುವ ಭಾರತೀಯರು. ಅಲ್ಲಿರುವ 16.8 ಲಕ್ಷ ಭಾರತೀಯರಿಗೆ ಒಸಿಐ ಕಾರ್ಡ್‌ಗಳನ್ನು ನೀಡಲಾಗಿದೆ. ಆನಂತರದ ಸ್ಥಾನಗಳಲ್ಲಿ ಯುಕೆಯಲ್ಲಿರುವ ಭಾರತೀಯರು (4.94) ಹಾಗೂ ಕೆನಡಾ (4.18 ಲಕ್ಷ) ಮಂದಿ ಈ ಕಾರ್ಡ್‌ಗಳನ್ನು ಪಡೆದಿದ್ದಾರೆ.