Bengaluru City

ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

Published

on

Share this

– ಅನ್ನ ನೀರಿಲ್ಲದೇ ಮಹಿಳೆಯರು ನಿತ್ರಾಣ, ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಾರ್ಯಕರ್ತೆಯರು

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಫ್ರೀಡಂ ಪಾರ್ಕ್‍ನಲ್ಲಿ ನಡೆದ ಈ ಧರಣಿಗೆ ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಚ್‍ಡಿಕೆ, ಪ್ರತಿಭಟನಾಕಾರರ ಅಹವಾಲು ಆಲಿಸಿ ಬೆಂಬಲ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿಮ್ಮ ಸೇವೆಗೆ 612 ಕೋಟಿ ರೂ. ಕೊಡಬೇಕು. ಸರ್ಕಾರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಿತ್ತು. ಸದನದಲ್ಲಿ ನಿಮ್ಮ ಪರ ಮಾತನಾಡ್ತಿನಿ ಅಂತಾ ಭರವಸೆ ನೀಡಿದರು.

ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರೋ ನಿಮಗೆ ನೀರಿಲ್ಲ. ಹೀಗಾಗಿ ನೀರಿನ ಟ್ಯಾಂಕರ್ ಕಳಿಸುತ್ತೇನೆ. ನಿತ್ಯ ಕರ್ಮದ ವ್ಯವಸ್ಥೆ ಮಾಡಲು ಪೊಲೀಸರಿಗೆ ಸೂಚಿಸುತ್ತೇನೆ. ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲು ಸೂಚಿಸುತ್ತೇನೆ. ಅಂಗನವಾಡಿ ಸಮಸ್ಯೆಗೆ ಮುಖ್ಯಮಂತ್ರಿ ಬಂದು ಸ್ಪಂದಿಸಬೇಕಿತ್ತು. ಈ ಬಗ್ಗೆ ಸಿಎಂ ಜೊತೆ ದೂರವಾಣಿ ಮೂಲಕ ಮಾತನಾಡ್ತೀನಿ. ನಿಮಗೆ ಆಗಿರೋ ತೊಂದರೆಗೆ ನಾನು ಕ್ಷಮೆಯಾಚಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತೆ ನಡೆದುಕೊಂಡಿರಲಿಲ್ಲ. ಇದೀಗ ನೀವು ಒಪ್ಪಿಕೊಂಡರೆ ತಿಂಡಿ ವ್ಯವಸ್ಥೆ ಮಾಡ್ತೀನಿ ಅಂತಾ ಹೇಳಿದರು.

ಸರ್ಕಾರದ ವಿರುದ್ಧ ಕಿಡಿ: ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ಇವರ ಕಣ್ಣಲ್ಲಿ ನೀರು ಹಾಕಿಸಿ ಈ ಸರ್ಕಾರ ಏನ್ ಸಾಧನೆ ಮಾಡುತ್ತೆ? ಆ ಭವನ ಈ ಭವನ ಅಂತಾ ಕಟ್ಟುತ್ತಾರೆ. ಅದಕ್ಕೆ ನೂರಾರು ಕೋಟಿ ರೂ. ಹಣ ವ್ಯಯ ಮಾಡ್ತಾರೆ. ಯೋಜನೆ ಹೆಸರಲ್ಲಿ ಸರ್ಕಾರ ಕಮಿಷನ್ ಪಡೆಯುತ್ತದೆ. ಯಾವುದಾದ್ರೂ ಒಂದು ಯೋಜನೆಯ ಕಮಿಷನ್ ನಿಲ್ಲಿಸಿದ್ರೆ ಈ ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಿಸಬಹುದು ಅಂತಾ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರನ್ನು ರಸ್ತೆ ಮೇಲೆ ಮಲಗಿಸಿದ್ರೆ ಇವರಿಗೆ ಗೌರವ ಬರುತ್ತಾ? ಸರ್ಕಾರಕ್ಕೆ ಕನಿಕರ ಇಲ್ವಾ? ಅಂತಾ ಕಿಡಿಕಾರಿದ ಎಚ್‍ಡಿಕೆ ಇವರಿಗೆ ಕುಡಿಯುವ ನೀರಿಲ್ಲ ಅಂತಾ ಸಿಎಂ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿದ್ರು.

ಅನ್ನ, ನೀರು ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ನಡೆಸಿದ್ದು, ಕೆಲವು ಮಹಿಳೆಯರು ಹಸಿವಿನಿಂದ ನಿತ್ರಾಣರಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿದ್ದಾರೆ. ಕಳೆದ 21 ಗಂಟೆಗಳಿಂದ ಅಂಗನವಾಡಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕ ಚಿಕ್ಕ ವಯಸ್ಸಿನ ನೂರಾರು ಮಕ್ಕಳು ಬೀದಿಯಲ್ಲೇ ನಿದ್ದೆಹೋಗಿದ್ದರು. ಅಂಗನವಾಡಿ ನೌಕರರು ರಸ್ತೆಯಲ್ಲಿ ನಿದ್ದೆಗೆ ಜಾರಿದ್ದಾಗ ಸಾವಿರಾರು ಪೊಲೀಸರು ರಕ್ಷಣೆ ನೀಡಿದ್ರು.

Click to comment

Leave a Reply

Your email address will not be published. Required fields are marked *

Advertisement
Advertisement