– ನಡುರಸ್ತೆಯಲ್ಲೇ ಮಲಗಿದ ಸಾವಿರಾರು ಮಹಿಳೆಯರು
ಬೆಂಗಳೂರು: ರಾಜ್ಯದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನ ರಸ್ತೆ ಮೇಲೆ ರಾತ್ರಿ ಮಲುಗುವ ಮೂಲಕ ತಮ್ಮ ಪ್ರತಿಭಟನೆಯ ಶಕ್ತಿಯನ್ನ ತೋರಿಸಿದ್ದಾರೆ.
ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್‍ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು. ಫ್ರೀಡಂಪಾರ್ಕ್ ರಸ್ತೆ ಬಳಿ ಪ್ರತಿಭಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಟ್ರಾಫಿಕ್ ಜಾಮ್ ಆಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳೇನು:
* ಕಾರ್ಯಕರ್ತರೆಯರು, ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ.
* ಕಾರ್ಯಕರ್ತೆಯರ ವೇತನ 6ರಿಂದ 10 ಸಾವಿರ ರೂ. ಹೆಚ್ಚಳ.
* ಸಹಾಯಕಿಯರ ವೇತನ 3ರಿಂದ 7,500 ರೂ. ಹೆಚ್ಚಳ.
* ಸಹಾಯಕಿಯರ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ.
* ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದಾರೆ.