ಲಕ್ನೋ: ಡಿವೈಡರ್‌ಗೆ ಡಿಕ್ಕಿಯಾಗಿ ಓವರ್‌ಲೋಡ್ ಆಗಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಬೊಲೆರೋ ಅಪ್ಪಚ್ಚಿಯಾಗಿದ್ದು, ಚಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttara Pradesh) ರಾಂಪುರ (Rampur) ಜಿಲ್ಲೆಯ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಬೊಲೆರೋ ಚಾಲಕ ಸಾವನ್ನಪ್ಪಿದ್ದಾರೆ. ಇನ್ನೂ ಬೊಲೆರೋ ವಾಹನದ ಮೇಲೆ ಉತ್ತರ ಪ್ರದೇಶ ಸರ್ಕಾರ ಎಂದು ಬರೆಯಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು – 13 ಮಂದಿ ಸಾವು, 98 ಜನರಿಗೆ ಗಾಯ
ಹೊಟ್ಟು ಸಾಗಿಸುತ್ತಿದ್ದ ಟ್ರಕ್ ಹೆದ್ದಾರಿಯಲ್ಲಿ ಹೊರಟಿದ್ದಾಗ ಡಿವೈಡರ್‌ಗೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ, ಪಕ್ಕದಲ್ಲಿದ್ದ ಬೊಲೆರೋ ವಾಹನದ ಮೇಲೆ ಪಲ್ಟಿಯಾಗಿದೆ. ಪರಿಣಾಮ ಬೊಲೆರೋ ಅಪ್ಪಚ್ಚಿಯಾಗಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಹಿತಿ ತಿಳಿದ ಬಳಿಕ ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಮತ್ತು ಹತ್ತಿರದ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಜೆಸಿಬಿ ಮೂಲಕ ಬೊಲೆರೋ ಮೇಲಿದ್ದ ಟ್ರಕ್‌ನ್ನು ಬೇರ್ಪಡಿಸಿದರು. ಬಳಿಕ ಚಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.
ಸ್ಥಳ ಪರಿಶೀಲನೆ ಬಳಿಕ ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಮಾಹಿತಿ ನೀಡಿ, ಓರ್ವ ವ್ಯಕ್ತಿಯ ಮೃತದೇಹ ಮಾತ್ರ ಪತ್ತೆಯಾಗಿದ್ದು, ಟ್ರಕ್ ಹಾಗೂ ಹೊಟ್ಟಿನ ಕೆಳಗೆ ಯಾರು ಸಿಲುಕಿಲ್ಲ. ಬೊಲೆರೋ ಮೇಲೆ ಉತ್ತರ ಪ್ರದೇಶ ಸರ್ಕಾರ ಎಂದು ಬರೆದಿರುವುದರಿಂದ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಮೊಬೈಲ್ ಪತ್ತೆಯಾಗಿದ್ದು, ಅದರ ಸಂಖ್ಯೆಯನ್ನು ಆಧರಿಸಿ ಮೃತ ಚಾಲಕನ ಕುಟುಂಬವನ್ನು ಸಂಪರ್ಕಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: 99 ಲಕ್ಷ ರೂ. ಸಾಲ ಹಿಂತಿರುಗಿಸದ ಆರೋಪ – ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR

