ಅಹಮದಾಬಾದ್: ಗುಜರಾತ್ ಸಾರಿಗೆ ಸಂಸ್ಥೆಯ ನಿರ್ವಾಹಕನೋರ್ವ 9 ರೂ. ಆಸೆಗಾಗಿ ಅಂದಾಜು 15 ಲಕ್ಷ ರೂ. ಕಳೆದುಕೊಂಡಿದ್ದಾನೆ. ಪ್ರಯಾಣಿಕನಿಂದ 9 ರೂ.ಪಡೆದು ಟಿಕೆಟ್ ನೀಡದ್ದಕ್ಕೆ ಆತನ ಸಂಬಳದಿಂದ 15 ಲಕ್ಷ ರೂ.ಗೆ ಕತ್ತರಿ ಹಾಕಲಾಗಿದೆ.
ಏನಿದು ಪ್ರಕರಣ?
ನಿರ್ವಾಹಕ ಚಂದ್ರಕಾಂತ್ ಪಟೇಲ್ ವಿರುದ್ಧ ಪ್ರಯಾಣಿಕರಿಗೆ ಟಿಕೆಟ್ ನೀಡದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಜರಾತಿನ ಸಾರಿಗೆ ಇಲಾಖೆ ವಿಶೇಷ ಸಮಿತಿಯನ್ನು ರಚಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಚಂದ್ರಕಾಂತ್ ದೋಷಿ ಎಂದು ಹೇಳಿತ್ತು. ದೋಷಿ ಎಂದು ಸಾಬೀತಾದ ಬೆನ್ನಲ್ಲೇ ಸಾರಿಗೆ ನಿಗಮ ಮಂಡಳಿ ಆತನ ಸಂಬಳದ ಎರಡು ಏರಿಕೆಯನ್ನು ಕಡಿತಗೊಳಿಸಿತ್ತು. ಸಾರಿಗೆ ಸಂಸ್ಥೆ ನಿರ್ಧರಿಸುವ ಸಂಬಳಕ್ಕೆ ಚಂದ್ರಕಾಂತ್ ತನ್ನ ವೃತ್ತಿಯನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.
Advertisement
Advertisement
2003 ಜುಲೈ 5ರಂದು ಚಂದ್ರಕಾಂತ್ ಪಟೇಲ್ ಕಾರ್ಯನಿರ್ವಹಿಸುತ್ತಿದ್ದ ಬಸ್ ಮಾರ್ಗ ಮಧ್ಯೆ ಪರಿಶೀಲನೆಗೆ ಒಳಪಟ್ಟಿತ್ತು. ಓರ್ವ ಪ್ರಯಾಣಿಕನಿಂದ 9 ರೂ. ಪಡೆದಿದ್ದ ಚಂದ್ರಕಾಂತ್ ಪಟೇಲ್ ಟಿಕೆಟ್ ನೀಡಿರಲಿಲ್ಲ. ಚಂದ್ರಕಾಂತ್ ವಿರುದ್ಧ ಸಾರಿಗೆ ನಿಗಮದಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ಹೈಕೋರ್ಟ್ ಮೆಟ್ಟಿಲೇರಿದ ಚಂದ್ರಕಾಂತ್:
ದೂರು ದಾಖಲಾದ ಒಂದು ತಿಂಗಳ ಬಳಿಕ ಚಂದ್ರಕಾಂತ್ ದೋಷಿ ಎಂದು ನಿಗಮ ಮಂಡಳಿ ಆದೇಶಿಸಿ ಆತನ ಸಂಬಳದ ಕೆಲ ಮೊತ್ತವನ್ನು ಕಡಿತಗೊಳಿಸಿತ್ತು. ಸಾರಿಗೆ ನಿಗಮದ ತೀರ್ಪು ಪ್ರಶ್ನಿಸಿ ಔದ್ಯೋಗಿಕ ನ್ಯಾಯಧೀಕರಣ ಮತ್ತು ಹೈ ಕೋರ್ಟ್ ಮೊರೆ ಹೋಗಿದ್ದ ಚಂದ್ರಕಾಂತ್ ಗೆ ಅಲ್ಲಿಯೂ ದೋಷಿ ಎಂದು ಪರಿಗಣಿಸಲಾಗಿತ್ತು. ಹಾಗೆ ಗುಜರಾತಿನ ಸಾರಿಗೆ ಸಂಸ್ಥೆಯ ತೀರ್ಪನ್ನು ಎತ್ತಿ ಹಿಡಿದು, ಚಂದ್ರಕಾಂತ್ ಸಲ್ಲಿಸಿದ ಎರಡೂ ಕಡೆ ಅರ್ಜಿ ವಜಾಗೊಂಡಿತ್ತು.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಕಾಂತ್ ಪರ ವಕೀಲರು, ಇಷ್ಟು ಚಿಕ್ಕ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ. ಸಾರಿಗೆ ಸಂಸ್ಥೆ ನೀಡಿರುವ ಶಿಕ್ಷೆಯಿಂದ ನನ್ನ ಕಕ್ಷಿದಾರರ ವೃತ್ತಿ ಜೀವನದಲ್ಲಿ 15 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನಿರ್ವಾಹಕ ಚಂದ್ರಕಾಂತ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ಎದುರಿಸಿದ್ದಾರೆ. ಹಲವು ಬಾರಿ ಸಾಮಾನ್ಯ ಶಿಕ್ಷೆ ಮತ್ತು ಸಣ್ಣ ಪ್ರಮಾಣದ ದಂಡವನ್ನು ವಿಧಿಸಲಾಗಿತ್ತು ಎಂದು ಸಾರಿಗೆ ಸಂಸ್ಥೆ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.