ಮೈಸೂರು: ಹಗರಣಗಳ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ಶನಿವಾರ ಬೆಳಿಗ್ಗೆ 10:30ಕ್ಕೆ ಮೈಸೂರಿನಲ್ಲಿ (Mysuru) ಆಯೋಜನೆಯಾಗಿದೆ. ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra)ತಿಳಿಸಿದ್ದಾರೆ.
ಮೈಸೂರು ಚಲೋ (Mysuru Chalo) ಪಾದಯಾತ್ರೆಯ ಮೈಸೂರಿಗೆ ತಲುಪಿದ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ನಮ್ಮ ಈ ಹೋರಾಟವು ತಾರ್ಕಿಕ ಅಂತ್ಯದತ್ತ ಸಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ಮಹಾರಾಜ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಮಾಜಿ ಮುಖ್ಯಮಂತ್ರಿ- ಅಪ್ರತಿಮ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಮತ್ತು ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಕೇಂದ್ರದ ಸಚಿವರು, ಬಿಜೆಪಿ- ಜೆಡಿಎಸ್ ಪಕ್ಷಗಳ ಸಂಸದರು, ಶಾಸಕ ಮಿತ್ರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
- Advertisement
- Advertisement
ತಾಯಿ ಚಾಮುಂಡೇಶ್ವರಿಯ ಬಳಿ ಬಂದು ಪೂಜೆ ಸಲ್ಲಿಸಿ, ಬೆಂಗಳೂರಿನಲ್ಲಿ ಕೆಂಪಮ್ಮ ದೇವಾಲಯದಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆ ಶುರು ಮಾಡಿದ್ದೆವು. ವರುಣದೇವತೆ ಆಶೀರ್ವಾದ ಮಾಡಿ ಪಾದಯಾತ್ರೆ ವೇಳೆ ಬಿಡುವು ಕೊಟ್ಟಿದ್ದರು ಎಂದಿದ್ದಾರೆ.
ಈಗ ನಾವು ಮೈಸೂರಿಗೆ ಪಾದಾರ್ಪಣೆ ಮಾಡಿದಾಗ ವರುಣ ದೇವತೆ ಆಶೀರ್ವಾದ ಮಾಡಿದ್ದಾರೆ. ಇದು ಮತ್ತೆ ಶುಭ ಸೂಚನೆಯಾಗಿದೆ. ಇನ್ನೂ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಿದ್ದೇವೆ. ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಅವರು ಕರೆ ನೀಡಿದ್ದಾರೆ.