Connect with us

Bengaluru City

ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ: ಬಿಎಸ್‍ವೈ

Published

on

ಬೆಂಗಳೂರು: ಇವತ್ತು ಸದನದಲ್ಲಿ ಅವರ ಶಾಸಕರೆಷ್ಟಿದ್ದರು? ನಮ್ಮ ಶಾಸಕರೆಷ್ಟಿದ್ದರು? ಸ್ಪೀಕರ್‌ಗೆ ಇದಕ್ಕಿಂತ ಪುರಾವೆ ಬೇಕಿತ್ತಾ? ಇವತ್ತಿನ ಕಾರ್ಯಕಲಾಪ ಮುಂದೂಡುವುದು ಮೈತ್ರಿ ನಾಯಕರ ಷಡ್ಯಂತ್ರವಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

ನಾವು ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ. ದೇಶ, ರಾಜ್ಯದ ಜನಕ್ಕೆ ತಿಳಿಯಲಿ. ಅದೆಷ್ಟು ಇವರು ಹೀಗೇ ಕಲಾಪ ನಡೆಸುತ್ತಾರೋ ನೋಡೋಣ. ವಿಶ್ವಾಸಮತಯಾಚನೆ ಮಾಡುತ್ತಾರೆಂದು ನಾವು ಸದನ ನಡೆಸಲು ಒಪ್ಪಿಗೆ ನೀಡಿದೆವು, ಆದರೆ ಅನಗತ್ಯವಾಗಿ ಕಾಲಹರಣ ಮಾಡಿದ್ದಾರೆ ಎಂದು ಮೈತ್ರಿ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದಿನ ಸದನವನ್ನು ಇಡೀ ದೇಶ ನೋಡಿದೆ, ಸದನದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂದು ಜನರಿಗೆ ತಿಳಿದಿದೆ. ಇಂದೇ ವಿಶ್ವಾಸ ಮತ ಯಾಚನೆ ಮಾಡುತ್ತಾರೆಂದು ಎಂದು ಹೇಳಿದ್ದಕ್ಕೆ ನಾವು ಒಪ್ಪಿಗೆ ನೀಡಿದ್ದೇವೆ. ವಿಶ್ವಾಸ ಮತ ಪ್ರಸ್ತಾವನೆ ಬಳಿಕ ಹದಿನೈದು ನಿಮಿಷದ ಬಳಿಕ ಅನಗತ್ಯ ವಿಚಾರ ಮಧ್ಯಕ್ಕೆ ತಂದರು. ಸ್ಪೀಕರ್ ಮಾತಿಗೆ ಬೆಲೆಕೊಟ್ಟು ವಿಶ್ವಾಸಮತಯಚನೆಗೆ ಅವಕಾಶ ಕೊಟ್ಟೆವು. ಹೀಗಾಗಿ ನಾವು ಹಠ ಮಾಡಲಿಲ್ಲ ಎಂದು ಬಿಎಸ್‍ವೈ ತಿಳಿಸಿದರು.

ಮೈತ್ರಿ ಪಕ್ಷಗಳ ಬಳಿ ಕೇವಲ 98 ಸಂಖ್ಯೆ ಇದೆ, ನಮ್ಮ ಬಳಿ 105 ಶಾಸಕರಿದ್ದಾರೆ. ಇಷ್ಟಾದರೂ ಸಿಎಂ ರಾಜೀನಾಮೆ ನೀಡಲಿಲ್ಲ. ಇಂದು ವಿಶ್ವಾಸ ಮತ ಸಾಬೀತು ಪಡಿಸದೆ, ಪ್ರಜಾತಂತ್ರ ವ್ಯವಸ್ಥೆಯ ಅಣಕು ಮಾಡಿದ್ದಾರೆ. ಒಂದು ರೀತಿ ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹರಿಹಾಯ್ದರು.

ರಾಜ್ಯಪಾಲರ ಸೂಚನೆಗೂ ಕಿಮ್ಮತ್ತಿಲ್ಲ
ನಮ್ಮ ಮನವಿಗೆ ರಾಜ್ಯಪಾಲರು ಸ್ಪಂದಿಸಿ, ಸ್ಪೀಕರ್‌ಗೆ  ಸೂಚನೆ ನೀಡಿದರು. ವಿಶ್ವಾಸಮತಯಾಚನೆ ಮುಗಿಸಬೇಕೆಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದರು. ಹೀಗಾಗಿ ರೂಲಿಂಗ್ ಕೊಡುವಂತೆ ಕೇಳಿದೆವು. ಆದರೆ ಸ್ಪೀಕರ್ ರೂಲಿಂಗ್ ಕೊಡಲಿಲ್ಲ. ರಾಜ್ಯಪಾಲರ ಮತನ್ನೂ ಕೇಳದೆ ಪ್ರಜಾಪ್ರಭುತ್ವವವನ್ನೇ ಬುಡಮೇಲು ಮಾಡಲಾಗುತ್ತಿದೆ. ಇವರಿಗೆಲ್ಲ ಏನಾಗಿದೆ. ಅಭಿವೃದ್ಧಿ ಕುಂಠಿತವಾಗಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಚರ್ಚೆ ಮಾಡದೇ ರಾಜಿನಾಮೆ ನೀಡಬೇಕಿತ್ತು ಎಂದು ಯಡಿಯೂರಪ್ಪ ಕಿಡಿ ಕಾರಿದರು.

ಸುಪ್ರೀಂಕೋರ್ಟ್ ಆದೇಶ ಸ್ಪಷ್ಟವಾಗಿದ್ದು, ಅರ್ಜಿದಾರ ಶಾಸಕರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶಿಸಿದೆ. ಶಾಸಕರಿಗೆ ವಿಪ್ ನೀಡಲು ಬಿಜೆಪಿ ಅಕ್ಷೇಪ ಮಾಡಿಲ್ಲ. ವಿಪ್ ಜಾರಿ ಮಾಡಿದರೆ ಶಾಸಕರಿಲ್ಲದೇ ಬಹುಮತ ಕಳೆದುಕೊಳ್ಳುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಈ ವಿಷಯ ಸಿಎಂಗೆ ಗೊತ್ತಿರಲಿಲ್ಲವೇ ಎಂದು ಬಿಎಸ್‍ವೈ ಪ್ರಶ್ನಿಸಿದರು.

ವರ್ಗಾವಣೆ ದಂಧೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾತ್ರಿ ಹಗಲು ಸಾವಿರಾರು ಫೈಲ್‍ಗಳು ವಿಲೇವಾರಿಯಾಗುತ್ತಿವೆ. ಅಲ್ಪ ಮತಕ್ಕೆ ಕುಸಿದರೂ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಸೂಚನೆ ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

Click to comment

Leave a Reply

Your email address will not be published. Required fields are marked *