ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಸಂಭವಿಸಿದ ಭಾರೀ ಭೂಕುಸಿತಕ್ಕೆ (Landslide) ಬಲಿಯಾದವರ ಸಂಖ್ಯೆ ದಿನೇ ದಿನೆ ಏರುತ್ತಿದೆ. ಇದುವರೆಗೂ 670 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರದ ಭೂಕುಸಿತದಿಂದ 150 ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದವು. ಯಂಬಲಿ ಗ್ರಾಮ ಮತ್ತು ಎಂಗಾ ಪ್ರಾಂತೀಯ ಅಧಿಕಾರಿಗಳ ಲೆಕ್ಕಾಚಾರದ ಆಧಾರದ ಮೇಲೆ ಸಾವಿನ ಸಂಖ್ಯೆಯನ್ನು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದಲ್ಲಿ ಯುಎನ್ ವಲಸೆ ಸಂಸ್ಥೆಯ ಮುಖ್ಯಸ್ಥ ಸೆರ್ಹಾನ್ ಅಕ್ಟೋಪ್ರಾಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ ಸಿಲುಕಿರುವ ನೂರಾರು ಜನರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಜನರೂ ಕೈಜೋಡಿಸಿದ್ದಾರೆ.
ಗ್ರಾಮಸ್ಥರು ಮನೆಯಲ್ಲಿ ಮಲಗಿದ್ದಾಗ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಎಂಗಾ ಪ್ರಾಂತ್ಯದ ಪ್ರತ್ಯೇಕ ಭಾಗದಲ್ಲಿ ಈ ದುರಂತ ಸಂಭವಿಸಿತ್ತು. ಬೃಹತ್ ಭೂಕುಸಿತದಿಂದ ಸಮಾಧಿಯಾದ ದೇಹಗಳನ್ನು ನಾವು ಇನ್ನೂ ಹುಡುಕುತ್ತಿದ್ದೇವೆ ಎಂದು ಸಮುದಾಯದ ನಾಯಕ ಮಾರ್ಕ್ ಇಪುಯಾ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ: ರಷ್ಯಾದಲ್ಲಿ ಶಾಲಾ ಮಕ್ಕಳಿಗೂ ಸೇನಾ ತರಬೇತಿ
ಭೂಕುಸಿತದಿಂದ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ-ಜಾನುವಾರುಗಳ ಸಾವಾಗಿದೆ. ಫಲವತ್ತಾದ ಭೂಮಿ ಮತ್ತು ಶುದ್ಧ ನೀರಿನ ಮೂಲಗಳು ಕೂಡ ಪರಿಣಾಮಕಾರಿಯಾಗಿ ನಾಶವಾಗಿವೆ ಎಂದು ಸಹಾಯಕ ಸಂಸ್ಥೆಗಳು ತಿಳಿಸಿವೆ.