ನವದೆಹಲಿ: ಹಿಮಾಚಲ ಪ್ರದೇಶ (Himachal) ಮತ್ತು ಉತ್ತರಾಖಂಡದಲ್ಲಿ (Uttar Kand) ನಿರಂತರ ಮಳೆ (Rain) ಮತ್ತು ಭೂಕುಸಿತದಿಂದ 66 ಜನರು ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದಾಗಿ ಮನೆಗಳ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ಆಗಸ್ಟ್ 13 ರಿಂದ ಭಾರೀ ಮಳೆ ಆಗುತ್ತಿದ್ದು, ಇದರ ಪರಿಣಾಮ 60 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಅಲ್ಲದೇ ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಕರ್ನಾಟಕ ನೆರೆ ರಾಜ್ಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 3.4 ತೀವ್ರತೆ ಭೂಕಂಪ
Advertisement
Advertisement
ಮಂಗಳವಾರ ನಡೆದ ರಕ್ಷಣಾ ಕಾರ್ಯಚರಣೆಯಲ್ಲಿ ಭೂಕುಸಿತದಿಂದಾಗಿ ಅವಶೇಷಗಳಲ್ಲಿ ಸಿಲುಕಿದ್ದ ಮೂರು ದೇಹಗಳನ್ನು ಹೊರತೆಗೆಯಲಾಗಿದೆ. ಶಿಮ್ಲಾದಲ್ಲಿ ಕುಸಿದ ಶಿವ ದೇವಾಲಯದ ಅವಶೇಷಗಳಿಂದ ಒಬ್ಬರ ದೇಹವನ್ನು ಹೊರತೆಗೆಯಲಾಗಿದೆ. ಈ ನಡುವೆ ನಗರದಲ್ಲಿ ಹೊಸದಾಗಿ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಭೂಕುಸಿತದ ನಂತರ ಆರು ತಾತ್ಕಾಲಿಕ ಮನೆಗಳು ಸೇರಿದಂತೆ ಕನಿಷ್ಠ ಎಂಟು ಮನೆಗಳು ಕುಸಿದಿವೆ. ಸಮ್ಮರ್ ಹಿಲ್‍ನ ಶಿವ ದೇವಾಲಯ ಸ್ಥಳದಲ್ಲಿ 12, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣಾನಗರದಲ್ಲಿ ಎರಡು ಶವಗಳನ್ನು ಹೊರ ತೆಗೆಯಲಾಗಿದೆ. ಕುಸಿದ ಶಿವ ದೇವಾಲಯದಲ್ಲಿ ಇನ್ನೂ 10 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ.
Advertisement
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿದೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯವು ಆಗಸ್ಟ್ 19 ರವರೆಗೆ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ವಿಶ್ವವಿದ್ಯಾನಿಲಯದ ಗ್ರಂಥಾಲಯವು ಆಗಸ್ಟ್ 20 ರವರೆಗೆ ಮುಚ್ಚಿರಲಿದೆ.
Advertisement
ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಮಂಗಳವಾರ ಸಭೆ ನಡೆಸಿದ್ದಾರೆ. ಹಿಮಾಚಲ ಸರ್ಕಾರವು ಆದ್ಯತೆಯ ಆಧಾರದ ಮೇಲೆ ಪುನಃಸ್ಥಾಪನೆ ಪ್ರಯತ್ನಗಳನ್ನು ತ್ವರಿತಗೊಳಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾನಿಗೊಳಗಾದ ವಿದ್ಯುತ್ ಮತ್ತು ನೀರು ಸರಬರಾಜು ಯೋಜನೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್‍ನಲ್ಲಿ ಅವರು, ಪಾಂಗ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಕಂಗ್ರಾದ ತಗ್ಗು ಪ್ರದೇಶಗಳಲ್ಲಿ 800 ಕ್ಕೂ ಹೆಚ್ಚು ಜನರನ್ನು ಅವರ ಗ್ರಾಮಗಳಿಂದ ಸ್ಥಳಾಂತರಿಸಲಾಗಿದೆ. ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟದಿಂದಾಗಿ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 6 ಏರಿದೆ. ಏಳು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ಜೋಶಿಮಠದ ಬಳಿಯ ಹೆಲಾಂಗ್‍ನಲ್ಲಿ ಮಂಗಳವಾರ ಕಟ್ಟಡವೊಂದು ಕುಸಿದಿದ್ದು, ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಮಹೇಶ್ವರ ಕಣಿವೆಯಲ್ಲಿ ಸಿಲುಕಿರುವ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ನಾನೂದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿ, ರಾನ್ಸಿ ಗ್ರಾಮಕ್ಕೆ ಜನರ ಸ್ಥಳಾಂತರ ಮಾಡಲಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡದ ಹಲವು ಸ್ಥಳಗಳಿಗೆ ಆಗಸ್ಟ್ 19 ರವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಕಾಲಕ್ರಮೇಣ ಮಳೆಯ ತೀವ್ರತೆ ಕಡಿಮೆಯಾಗಬಹುದು. ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜನರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ಐವರ ಸಾವು
Web Stories