ಹೈದರಾಬಾದ್: ಟ್ರಾಫಿಕ್ ಪೊಲೀಸರೊಬ್ಬರು ಲಂಚ ಸ್ವೀಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಪೇದೆಯ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಹೈದರಾಬಾದ್ ನಿವಾಸಿಯಾದ ಶ್ರೀಧರ್ ವೇಮುಲಾ ಎಂಬವರು ಟ್ರಾಫಿಕ್ ಪೊಲೀಸರು ದ್ವಿಚಕ್ರವಾಹನ ಸವಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೀಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹೆಲ್ಮೆಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಸವಾರರನ್ನ ತಡೆದಿದ್ದಾರೆ. ಆ ವ್ಯಕ್ತಿ ಪೊಲೀಸರೊಂದಿಗೆ ಸ್ವಲ್ಪ ಹೊತ್ತು ಚರ್ಚೆ ನಡೆಸಿದ ನಂತರ ಪರ್ಸ್ ತೆಗೆದು ಹಣ ನೀಡುವುದು ಕಾಣುತ್ತದೆ. ಹಣ ಸ್ವೀಕರಿಸಿದ ಟ್ರಾಫಿಕ್ ಪೊಲೀಸ್ ಸವಾರನನ್ನು ಬಿಟ್ಟು ಕಳಿಸಿದ್ದಾರೆ.
Advertisement
ಇದರ ದೃಶ್ಯಾವಳಿಗಳನ್ನ ಶ್ರೀಧರ್ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಮಾರ್ಚ್ 17ರಂದು ಹೈದರಾಬಾದ್ ಪೊಲೀಸರ ಅಧಿಕೃತ ಫೇಸ್‍ಬುಕ್ ಪೇಜ್‍ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈದರಾಬಾದ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಈ ನಡುವೆ ಈ ವೀಡಿಯೋ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು ವೈರಲ್ ಆಗಿದೆ. ಇದನ್ನ 10 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.
Advertisement
ಮಾರ್ಚ್ 20ರಂದು ಹೈದರಾಬಾದ್ ಪೊಲೀಸರು ಮತ್ತೆ ಕಮೆಂಟ್ ಮಾಡಿದ್ದು, ಟ್ರಾಫಿಕ್ ಇಲಾಖೆಯಿಂದ ಇವರನ್ನು ತೆಗೆದುಹಾಕಲಾಗುತ್ತಿದೆ. ನಿಯಮದ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Advertisement
ಟ್ರಾಫಿಕ್ ಪೊಲೀಸರ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನ ಕೆಲವರು ಒಪ್ಪಿದ್ದರೆ ಇನ್ನೂ ಕೆಲವರು ಲಂಚ ಕೊಟ್ಟ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.