– ಇನ್ನೂ ಪತ್ತೆಯಾಗಬೇಕಿವೆ 6 ಮೃತದೇಹಗಳು
– 700 ಸಿಬ್ಬಂದಿಯಿಂದ ಕಾರ್ಯಾಚರಣೆ
ಹೈದರಾಬಾದ್: ಫೆ.22 ರಂದು ಕುಸಿದಿದ್ದ ನಾಗರ್ಕರ್ನೂಲ್‌ನ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದಲ್ಲಿ (Srisailam Left Bank Canal) ರಕ್ಷಣಾ ತಂಡಗಳು ಮತ್ತೊಬ್ಬ ಕಾರ್ಮಿಕನ ಶವವನ್ನು ಪತ್ತೆಹಚ್ಚಿದ್ದಾರೆ. ಈ ದುರಂತದಲ್ಲಿ 8 ಕಾರ್ಮಿಕರು ಸಿಲುಕಿಕೊಂಡಿದ್ದರು.
ಮಂಗಳವಾರ ಮುಂಜಾನೆ ರಕ್ಷಣಾ ತಂಡಗಳು ಮತ್ತೊಂದು ಮೃತದೇಹ ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿವೆ. ಅದನ್ನು ಹೊರತೆಗೆಯಲು ಕೆಲಸ ನಡೆಯುತ್ತಿದೆ. ಇನ್ನೂ 6 ಮೃತದೇಹಗಳು ಪತ್ತೆಯಾಗಬೇಕಿವೆ. ಗುರುಪ್ರೀತ್ ಸಿಂಗ್ ಎಂಬ ಕಾರ್ಮಿಕನ ಮೃತದೇಹವನ್ನು ಮಾ.9 ರಂದು ಹೊರತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಿಭಾಗಗಳು ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ 25 ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ತಂಡಗಳು ಕುಸಿದ ಬಂಡೆಗಳ ಅವಶೇಷಗಳು, ಸುರಂಗದ ಒಳಗಿನಿಂದ ಮಣ್ಣು, ಹೂಳು ಮತ್ತು ನೀರನ್ನು ತೆಗೆಯುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 700 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಸುರಂಗದ 14 ಕಿಲೋಮೀಟರ್ ದೂರದಲ್ಲಿ ಅವಘಡ ಸಂಭವಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಅವಘಡ ನಡೆದ ಪ್ರದೇಶದ 30 ಮೀಟರ್‌ಗಳನ್ನು ಅತ್ಯಂತ ಅಪಾಯಕಾರಿ ವಲಯವೆಂದು ಗುರುತಿಸಲಾಗಿದೆ.
ಎಸ್‌ಎಲ್‌ಬಿಸಿ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy ) ಸೋಮವಾರ ಸಭೆ ನಡೆಸಿ ಪರಿಶೀಲಿಸಿದರು. ಮೃತರ ಸಂಬಂಧಿಕರಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಇದನ್ನೂ ಓದಿ: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ