ನವದೆಹಲಿ: ದೋಷಪೂರಿತ ಬ್ರೇಕ್ ಭಾಗವನ್ನು (Faulty Brake Part) ಸರಿಪಡಿಸಲು 3 ಲಕ್ಷಕ್ಕೂ ಹೆಚ್ಚು RayZR 125 Fi Hybrid ಮತ್ತು Fascino 125 Fi Hybrid ಸ್ಕೂಟರ್ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಇಂಡಿಯಾ ಯಮಹಾ ಮೋಟಾರ್ (India Yamaha Motor) ಹೇಳಿದೆ.
ಮೇ 2, 2024 ರಿಂದ ಸೆಪ್ಟೆಂಬರ್ 3, 2025 ರ ನಡುವೆ ತಯಾರಿಸಲಾದ ತನ್ನ 125 ಸಿಸಿ ಸ್ಕೂಟರ್ ಮಾದರಿಗಳ 3,06,635 ಯೂನಿಟ್‌ಗಳಿಗೆ ಕಂಪನಿಯು ಸ್ವಯಂಪ್ರೇರಿತವಾಗಿ ಹಿಂಪಡೆಯುವ ಅಭಿಯಾನವನ್ನು ಪ್ರಾರಂಭಿಸಿದೆ. ಇದು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಇಂಡಿಯಾ ಯಮಹಾ ಮೋಟಾರ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ವಾಹನಗಳಿಗೆ ನಿರ್ದಿಷ್ಟ ಭಾಗವನ್ನು ಅಧಿಕೃತ ಯಮಹಾ ಸರ್ವಿಸ್ ಕೇಂದ್ರಗಳಲ್ಲಿ ಉಚಿತವಾಗಿ ಬದಲಾಯಿಸಿ ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: Explained | ಮತ್ತೆ ಬಟನ್ ಫೀಚರ್‌ನೊಂದಿಗೆ ಬರಲಿವೆ ಕಾರುಗಳು- ಟಚ್‌ಸ್ಕ್ರೀನ್ ಬೇಡ ಯಾಕೆ?
ಕೆಲವು ಸ್ಕೂಟರ್‌ಗಳಲ್ಲಿ ಮುಂಭಾಗದ ಬ್ರೇಕ್ ಕ್ಯಾಲಿಪರ್‌ನಲ್ಲಿ ದೋಷವಿರುವುದು ಕಂಪನಿಯ ಆಂತರಿಕ ಮೌಲ್ಯಮಾಪನದಲ್ಲಿ ಬಹಿರಂಗವಾಗಿದೆ. ಎಲ್ಲಾ ಸ್ಕೂಟರ್‌ಗಳಲ್ಲಿ ಈ ದೋಷ ಇಲ್ಲದೇ ಇದ್ದರೂ ಸುರಕ್ಷತೆ ದೃಷ್ಟಿಯಿಂದ ಹಿಂಪಡೆಯಲು ಯಮಹಾ ಮುಂದಾಗಿದೆ.
ಯಮಹಾ ಮಾಲೀಕರಿಗೆ ಚಾಸಿಸ್ ಸಂಖ್ಯೆ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಆರಂಭಿಸಿದೆ. ಗ್ರಾಹಕರು ಅಧಿಕೃತ ಇಂಡಿಯಾ ಯಮಹಾ ಮೋಟಾರ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಚಾಸಿಸ್ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಬಹುದು.


