ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ವಿರುದ್ಧ ವಾಗ್ದಂಡನೆ (Impeachment) ಪ್ರಸ್ತಾವನೆಯ ಪ್ರಕ್ರಿಯೆಗೆ ಸಂಸತ್ತಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ನಗದು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾರನ್ನು ಪದಚ್ಯುತಗೊಳಿಸುವಂತೆ ಕೋರಿ ಪಕ್ಷಾತೀತವಾಗಿ 200ಕ್ಕೂ ಹೆಚ್ಚು ಸಂಸದರು ಅಂಕಿತ ಹಾಕಿದ್ದಾರೆ.
ಲೋಕಸಭೆಯ (Loksabha) 145 ಮತ್ತು ರಾಜ್ಯಸಭೆಯ 63 ಸಂಸದರು ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆ ಕೋರಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ. ರಾಜ್ಯಸಭೆಯ ಸ್ಪೀಕರ್ ಜಗದೀಪ್ ಧನಕರ್ ಅವರಿಗೆ ಸಲ್ಲಿಕೆಯಾದ ಪತ್ರಕ್ಕೆ ಆಪ್ ಮತ್ತು ಇಂಡಿಯಾ ಕೂಟದ ನಾಯಕರು ಸೇರಿದಂತೆ 63 ರಾಜ್ಯಸಭಾ ಸದಸ್ಯರು ಅಂಕಿತ ಹಾಕಿದ್ದಾರೆ.
ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ನೋಟಿಸ್ ಸಲ್ಲಿಸಲಾಗಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್ ರಿಸೈನ್ ಮಾಡಿದ್ದು ಯಾಕೆ?
ವಾಗ್ದಂಡನೆ ಪ್ರಕ್ರಿಯೆ ಮುಂದೇನು?
ವಾಗ್ದಂಡನೆ ಎಂದರೆ ನ್ಯಾಯಾಧೀಶರ ಪದಚ್ಯುತ ಪ್ರಕ್ರಿಯೆ. ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕಾಗುತ್ತದೆ.
ಈ ಪ್ರಸ್ತಾವನೆಯನ್ನು ಸ್ಪೀಕರ್ ಅಂಗೀಕರಿಸಬಹುದು/ತಿರಸ್ಕರಿಸಬಹುದು. ಆರೋಪ ಪರಿಶೀಲಿಸಲು ಸ್ಪೀಕರ್ ಅಥವಾ ಅಧ್ಯಕ್ಷರು ಸಮಿತಿ ರಚಿಸುತ್ತಾರೆ. ಉಭಯ ಸದನಗಳಲ್ಲಿ ಪ್ರಸ್ತಾವನೆ ಅಂಗೀಕರಿಸಬೇಕು. ಇದನ್ನೂ ಓದಿ: ತಲಾ ಆದಾಯ ಶೇ.93.6ರಷ್ಟು ಹೆಚ್ಚಳ – ದೇಶದಲ್ಲೇ ಅಗ್ರ ಸ್ಥಾನಕ್ಕೇರಿದ ಕರ್ನಾಟಕ
ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು. ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ, ನ್ಯಾಯಶಾಸ್ತ್ರಜ್ಞರು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುತ್ತದೆ. ತನಿಖಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಎರಡೂ ಸದನಗಳಲ್ಲಿ ವರದಿ ಮೇಲೆ ಚರ್ಚೆ ನಡೆದ ಬಳಿಕ ಪದಚ್ಯುತಗೊಳಿಸುವ ಪ್ರಸ್ತಾವನೆಯ ಮೇಲೆ ಮತದಾನ ಮಾಡಲಾಗುತ್ತದೆ. 2/3ರಷ್ಟು ಬಹುಮತ ದೊರೆತರೆ ವರ್ಮಾರ ವಾಗ್ದಂಡನೆ ಆಗಲಿದೆ. ಬಳಿಕ ಸಂಸತ್ ಶಿಫಾರಸಿನಂತೆ ರಾಷ್ಟ್ರಪತಿಗಳು ವಜಾ ಮಾಡುತ್ತಾರೆ.