ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur violence) ಶಾಂತಿ ಸುವ್ಯವಸ್ಥೆ ಕಾಪಾಡಲು 10,800 ಸೈನಿಕರನ್ನು (Soldiers) ಕಳುಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ನಿಯೋಜಿಸಲಾದ ಕೇಂದ್ರೀಯ ಭದ್ರತಾ ಪಡೆಗಳ ಒಟ್ಟು ಸಂಖ್ಯೆ 288ಕ್ಕೆ ತಲುಪಿದೆ ಎಂದು ರಾಜ್ಯದ ಮುಖ್ಯ ಭದ್ರತಾ ಸಲಹೆಗಾರ ತಿಳಿಸಿದ್ದಾರೆ.
90 ಕಂಪನಿಗಳು ಅಥವಾ ಕೇಂದ್ರೀಯ ಪಡೆಗಳ ಸರಿಸುಮಾರು 10,800 ಸೈನಿಕರ ಸೇರ್ಪಡೆಯೊಂದಿಗೆ ಮಣಿಪುರದಲ್ಲಿ ನಿಯೋಜಿಸಲಾದ ಒಟ್ಟು ಕಂಪನಿಗಳ ಸಂಖ್ಯೆ 288ಕ್ಕೆ ತಲುಪಿದೆ ಎಂದು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅದಾನಿಯನ್ನು ಬಂಧಿಸಬೇಕು, ಸಂಸತ್ತಿನಲ್ಲಿ ಹೋರಾಡುತ್ತೇವೆ: ಮಲ್ಲಿಕಾರ್ಜುನ ಖರ್ಗೆ
ನಾಗರಿಕರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಹಾಗೂ ದುರ್ಬಲ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಸಮನ್ವಯ ಘಟಕಗಳು ಹಾಗೂ ಜಂಟಿ ನಿಯಂತ್ರಣ ಕೊಠಡಿಗಳನ್ನ ಸ್ಥಾಪಿಸಲಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಎಲ್ಲಾ ಪ್ರದೇಶಗಳು ನಿಯಂತ್ರಣಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ನವೆಂಬರ್ 18ರಂದು ಮಣಿಪುರದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಆ ಬಳಿಕ ಹೆಚ್ಚುವರಿ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ನಿಯೋಜಿಸಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ
ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು.
ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು, ಶಾಂತಿಯನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳನ್ನ ನೇರವಾಗಿ ಹೊಣೆ ಮಾಡಿತು. ಇದನ್ನೂ ಓದಿ: ಅಘಾಡಿಗೆ ಆಪರೇಷನ್ ಭೀತಿ – ಮತ್ತೆ ರೆಸಾರ್ಟ್ ಪಾಲಿಟಿಕ್ಸ್ , ಕರ್ನಾಟಕಕ್ಕೆ ಶಾಸಕರು?