Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ

Public TV
3 Min Read
earthquake myanmar

– ಭಾರತದಿಂದ ಸಹಾಯಹಸ್ತ – ಆಪರೇಷನ್‌ ಬ್ರಹ್ಮ ಸಕ್ಸಸ್‌

ನೇಪಿಟಾವ್/ಬ್ಯಾಂಕಾಕ್: ಮಯನ್ಮಾರ್‌ (Myanmar) ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶನಿವಾರದ ಹೊತ್ತಿಗೆ ಸಾವಿನ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, 2,376 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ 11:50ರ ಹೊತ್ತಿಗೆ ಮೊದಲ ಬಾರಿಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದಾದಗ 15 ನಿಮಿಷಗಳಲ್ಲೇ ಮತ್ತೊಮ್ಮೆ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಲ್ಲದೇ ಶುಕ್ರವಾರ ರಾತ್ರಿ 11:56ರ ವೇಳೆ ಮ್ಯಾನ್ಮಾರ್‌ನಲ್ಲಿ 6ನೇ ಬಾರಿಗೆ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿತ್ತು. ಹೀಗಾಗಿ ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ ಎರಡೂ ಕಡೆ ಸೇರಿ ಒಟ್ಟು ಸಾವಿನ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಅವಶೇಷಗಳ ಅಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

ರಸ್ತೆಗಳಲ್ಲೇ ಚಿಕಿತ್ಸೆ:
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಆಪರೇಷನ್‌ ಭ್ರಹ್ಮ ಸಕ್ಸಸ್‌
ಸಂತ್ರಸ್ತವಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ಸುಮಾರು 15 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಪರಿಹಾರ ಸಾಮಗ್ರಿ ಹೊತ್ತ C-130-A ಐಎಎಫ್‌ (IAF) ವಿಮಾನ ಯಶಸ್ವಿಯಾಗಿ ಮ್ಯಾನ್ಮಾರ್‌ ತಲುಪಿದ್ದು, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡುತ್ತಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ.

ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ:
ಮ್ಯಾನ್ಮಾರ್, ಥಾಯ್ಲೆಂಡ್‌ನಲ್ಲಿ ಭೂಂಕಪದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5:16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ತಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

Share This Article