ರೆಫ್ರಿ ವಿವಾದಿತ ತೀರ್ಪಿನಿಂದ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ – 100ಕ್ಕೂ ಹೆಚ್ಚು ಮಂದಿ ಸಾವು

Public TV
1 Min Read
Guinea

ಕೊನಕ್ರಿ: ಗಿನಿಯಾದ (Guinea) 2ನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ (Football Fans) ನಡುವೆ ಘರ್ಷಣೆ ಉಂಟಾಗಿ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡು ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ರೆಫ್ರಿ ನೀಡಿದ ವಿವಾದಿತ ತೀರ್ಪು ಅಭಿಮಾನಿಗಳ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.

ಘಟನೆ ನಂತರ ಇಲ್ಲಿನ ಸ್ಥಳೀಯ ಆಸ್ಪತ್ರೆ ಮುಂಭಾಗ ಹೆಣಗಳ ರಾತ್ರಿಯೇ ಇತ್ತು, ಕೆಲವರ ದೇಹಗಳನ್ನ ಆಸ್ಪತ್ರೆಯ ವರಾಂಡದಲ್ಲಿ ಇಡಲಾಗಿತ್ತು. 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ ಎನ್ನಲಾಗಿದೆ.

ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ರೆಫ್ರಿ ತೀರ್ಪಿನಿಂದ ರೊಚ್ಚಿಗೆದ್ದು ಘರ್ಷಣೆಗೆ ಇಳಿದಿದ್ದರು. ಇದು ದೊಡ್ಡ ದಂಗೆಯಾಗಿ ಮಾರ್ಪಟ್ಟಿತು. ಈ ವೇಳೆ ಸಮೀದಲ್ಲಿದ್ದ ಪೊಲೀಸ್‌ ಠಾಣೆಯನ್ನೂ ಧ್ವಂಸಗೊಳಿಸಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

2021ರ ದಂಗೆಯ ನಂತರ ಆಲ್ಫಾ ಕಾಂಡೆ ಗಿನಿಯಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡರು. ಆ ಬಳಿಕ ಅಧ್ಯಕ್ಷ ಸ್ಥಾನಕ್ಕೇರಿದ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ತನ್ನನ್ನು ತಾನೇ ಅಧ್ಯಕ್ಷ ಎಂದು ಘೋಷಿಸಿಕೊಂಡರು. ಈ ವೇಳೆ ಚುನಾವಣಾ ಪ್ರವಾರದ ಭಾಗವಾಗಿ ಹಾಗೂ ತನಗೆ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಹಿಂದೆಯೂ ಈ ರೀತಿಯ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Share This Article