ಬಾಗಲಕೋಟೆ: ಬಹಿರ್ದೆಸೆಗೆ ಹೋಗಿದ್ದಾಗ ಏಕಾಏಕಿ ರೈಲು ಆಗಮಿಸಿದ ಹಿನ್ನೆಲೆಯಲ್ಲಿ ಹಳಿಯ ನಡುವೆಯೇ ಮಲಗಿ ಸಾವಿನ ದವಡೆಯಿಂದ ವ್ಯಕ್ತಿಯೊಬ್ಬರು ಪಾರಾದ ಘಟನೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧರೊಬ್ಬರು ಬಾಗಲಕೋಟೆ ರೈಲು ನಿಲ್ದಾಣದ ಸಮೀಪ ಹಳಿಯ ಮೇಲೆ ಬಹಿರ್ದೆಸೆಗೆ ಕುಳಿತಿದ್ದಾರೆ. ಅದೇ ಸಮಯಕ್ಕೆ ಗೂಡ್ಸ್ ರೈಲೊಂದು ಬಂದಿದೆ. ದಿಕ್ಕು ತೋಚದೆ ವ್ಯಕ್ತಿ ಎರಡೂ ರೈಲು ಹಳಿಗಳ ನಡುವೆ ಮಲಗಿದ್ದಾರೆ.
ಸ್ಥಳಿಯರು ಹಳಿಗಳ ಮಧ್ಯೆಯೇ ಮಲಗುವಂತೆ ಕನ್ನಡದಲ್ಲಿ ಕೂಗಿ ಹೇಳಿದ್ದರಿಂದ ಅವರು ಹಾಗೆಯೇ ಮಲಗಿದ್ದಾರೆ. ರೈಲು ನಿಂತ ಬಳಿಕ ಬದುಕಿತು ಬಡ ಜೀವ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಈ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ.
ಸಾವಿನ ದವಡೆಯಿಂದ ಪಾರಾದ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ರೈಲ್ವೇ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈ ರೀತಿಯ ಘಟನೆ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.