ಹಾಸನ: ಸರ್ಕಾರ ಅಂಗನವಾಡಿ ಮೂಲಕ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಕೋಟಿ, ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಹೀಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರಗಳಲ್ಲಿ ಚಿಕ್ಕಿಯೂ ಒಂದು. ಆದರೆ ಹಾಸನ ಜಿಲ್ಲೆಯ ಅಂಗನವಾಡಿಗಳಲ್ಲಿ ಅವಧಿ ಮೀರಿದ ಚಿಕ್ಕಿ ವಿತರಣೆಯಾಗುತ್ತಿದ್ದು, ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.
ಅವಧಿ ಮೀರಿದ ಆಹಾರ ವಿತರಣೆ ಆಗುತ್ತಿದ್ದರೂ ಇವೆಲ್ಲ ಕಂಡು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೆಡಿಪಿ ಸದಸ್ಯ ಇಸ್ಮಾಯಿಲ್‌ಗೆ ಮಾಹಿತಿ ನೀಡಿದ್ದು, ಇದರಿಂದ ಅರಕಲಗೂಡು ತಾಲೂಕಿನ ಹಲವೆಡೆ ಅಂಗನವಾಡಿಗಳಿಗೆ ಇಸ್ಮಾಯಿಲ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಅಂಗನವಾಡಿಗಳಲ್ಲಿ ಅವಧಿ ಮೀರಿದ ಚಿಕ್ಕಿ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಆರೋಪ ಮಾಡುವುದೇ ಬಿಜೆಪಿ ಕೆಲಸ: ಸತೀಶ್ ಜಾರಕಿಹೊಳಿ
ಹಣ ಹೊಡೆಯುವ ಉದ್ದೇಶದಿಂದ ಅವಧಿ ಮೀರಿದ ಚಿಕ್ಕಿಯನ್ನು ವಾಪಸ್ ಕಳುಹಿಸದೇ, ಮಕ್ಕಳು ಹಾಗೂ ಬಾಣಂತಿಯರಿಗೆ ವಿತರಿಸುತ್ತಾರೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ. ಈ ಅವಧಿ ಮೀರಿದ ಚಿಕ್ಕಿಯನ್ನೇ ಮಕ್ಕಳಿಗೆ ನೀಡುತ್ತಿರುವುದರ ಹಿಂದೆ ಅಧಿಕಾರಿಗಳು, ಗುತ್ತಿಗೆದಾರರ ಕೈವಾಡ ಇರುವುದಾಗಿಯೂ ಆರೋಪ ಕೇಳಿ ಬಂದಿದೆ. ಈ ಅವಧಿ ಮೀರಿದ ಚಿಕ್ಕಿಯನ್ನು ತಿಂದರೆ ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯದ ಪರಿಸ್ಥಿತಿ ಏನಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ಸಿದ್ದರಾಮಯ್ಯಗೆ ಸಮನ್ಸ್
ಸರ್ಕಾರವೇನೋ ಮಕ್ಕಳು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಹೆಸರಲ್ಲಿ ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಆದರೆ ಅವಧಿ ಮೀರಿದ ಆಹಾರ ನೀಡಿದರೆ ಅದು ಹೇಗೆ ಪೌಷ್ಟಿಕ ಆಹಾರವಾಗುತ್ತೆ? ಆ ರೀತಿಯ ಆಹಾರದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.