ನವದೆಹಲಿ: ಬೆಳಗಿನ ಜಾವ ವಾಕಿಂಗ್ ಮುಗಿಸಿ ಮರಳುತ್ತಿದ್ದಾಗ ಇಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಉದ್ಯಮಿ ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ಶಾಹದಾರ (Shahdara) ಜಿಲ್ಲೆಯ ಫರ್ಶ್ ಬಜಾರ್ ಬಳಿ ನಡೆದಿದೆ.
ಮೃತ ಉದ್ಯಮಿಯನ್ನು ದೆಹಲಿಯ ಕೃಷ್ಣ ನಗರದ ನಿವಾಸಿಯಾಗಿರುವ 32 ವರ್ಷದ ಸುನಿಲ್ ಜೈನ್ ಎಂದು ಗುರುತಿಸಲಾಗಿದ್ದು, ಪಾತ್ರೆ ವ್ಯಾಪಾರವನ್ನು ಮಾಡುತ್ತಿದ್ದರು.ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಬೆಳಗಿನ ಜಾವ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಿಂದ ವಾಕಿಂಗ್ ಮುಗಿಸಿ, ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಮರಳುತಿದ್ದಾಗ ಈ ಘಟನೆ ನಡೆದಿದೆ. ಒಟ್ಟು 7 ಬಾರಿ ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ. ಮೃತ ಸುನಿಲ್ ಯಾರೊಂದಿಗೂ ಯಾವುದೇ ರೀತಿಯ ವೈರತ್ವವನ್ನು ಹೊಂದಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಬೆಳಿಗ್ಗೆ ಸ್ಕೂಟರ್‌ನಲ್ಲಿ ಮರಳುತ್ತಿರುವಾಗ ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿ ಸುನಿಲ್‌ಗೆ, ‘ನಿಮ್ಮ ಫೋನ್ ಕೆಳಗೆ ಬಿದ್ದಿದೆ’ ಎಂದು ಹೇಳಿದ. ಮತ್ತೆ, ‘ನಿಮ್ಮ ಹೆಸರೇನು’ ಎಂದು ಕೇಳಿದ. ಅಷ್ಟರಲ್ಲಿ ಇನ್ನೊಬ್ಬ ಆರೋಪಿ ಬೈಕ್‌ನಿಂದ ಕೆಳಗಿಳಿದು ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸುನಿಲ್, ‘ನನ್ನ ಮೇಲೆ ಗುಂಡು ಹಾರಿಸಬೇಡಿ’ ಎಂದು ಕೇಳಿಕೊಂಡರೂ, ಬಿಡದೇ 7 ಸುತ್ತಿನ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಮುಖವಾಡ ಧರಿಸಿದ್ದರು. ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ಸ್ನೇಹಿತ ಮಾಹಿತಿ ನೀಡಿದ್ದಾನೆ.
ಡಿಸಿಪಿ ಶಾಹದಾರ ಮಾತನಾಡಿ, ಘಟನಾ ಸ್ಥಳಕ್ಕೆ ಕ್ರೈಂ ತಂಡ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal), ಬಿಜೆಪಿ ಆಡಳಿತದಲ್ಲಿ ಅಪರಾಧಿಗಳು ನಿರ್ಭಯರಾಗಿದ್ದಾರೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಎಎಪಿ ನಾಯಕ ಹಾಗೂ ಸಚಿವ ಸೌರಭ್ ಭಾರದ್ವಾಜ್, ದೆಹಲಿಯು ಭಾರತದ ಅಪರಾಧಗಳ ರಾಜಧಾನಿಯಾಗಿದೆ ಎಂದು ಹರಿಹಾಯ್ದಿದ್ದಾರೆ.ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ