ಭುವನೇಶ್ವರ: ಬಾಲಕಿಯ (Girl) ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯನ್ನು ಹತ್ಯೆಗೈದು ಆಕೆಯ ದೇಹವನ್ನು ಕತ್ತರಿಸಿ ನದಿಗೆ ಎಸೆದಿರುವ ಘಟನೆ ಒಡಿಶಾದ (Odisha) ಸುಂದರ್‌ಗಢ್‌ನಲ್ಲಿ ನಡೆದಿದೆ.
ಹತ್ಯೆಗೈದ ಆರೋಪಿಯನ್ನು ಕುನು ಕಿಸ್ಸಾನ್ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ ವರ್ಷ ಆಗಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆತನ ವಿರುದ್ಧ ಧರೂದಿಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿತ್ತು. ಆತ ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
Advertisement
ಬಾಲಕಿ ಸುಂದರ್‌ಗಢ್ ಜಿಲ್ಲೆಯವಳಾಗಿದ್ದು, ಜರ್ಸುಗುಡಾ ಪಟ್ಟಣದಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದಳು. ಡಿಸೆಂಬರ್ 7 ರಂದು ಬಾಲಕಿಯ ಕುಟುಂಬದಿಂದ ಆಕೆ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದ ಪೊಲೀಸರು, ಬಾಲಕಿ ಇಬ್ಬರು ವ್ಯಕ್ತಿಗಳೊಂದಿಗೆ ಬೈಕ್‌ನಲ್ಲಿ ತೆರಳಿದ್ದನ್ನು ಪತ್ತೆ ಹಚ್ಚಿದ್ದರು. ಅವರು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಕುನು ಕಿಸ್ಸಾನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
Advertisement
Advertisement
ಆರೋಪಿಗಳು ರೂರ್ಕೆಲಾ ಮತ್ತು ದಿಯೋಗರ್‌ನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 143ರಲ್ಲಿ ಚಾಕುವಿನಿಂದ ಸಂತ್ರಸ್ತೆಯ ಕತ್ತು ಸೀಳಿ, ಆಕೆಯ ದೇಹದ ಭಾಗಗಳನ್ನು ಬ್ರಹ್ಮಣಿ ನದಿಯ ತಾರ್ಕೆರಾ ನಲಿ ಮತ್ತು ಬಲುಘಾಟ್‌ನಲ್ಲಿ ಎಸೆದಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
Advertisement
ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಸಹಾಯದಿಂದ ಪೊಲೀಸರು ಬ್ರಹ್ಮಣಿ ನದಿಯಲ್ಲಿ ದೇಹದ ಭಾಗಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯ ನಂತರ ಬಾಲಕಿಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.