ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಅಲ್ಲ ನಿದ್ದೆರಾಮಯ್ಯ. ರಾಜ್ಯದಲ್ಲಿ ಸುರಕ್ಷತೆ ಇಲ್ಲ. ಆಡಳಿತ ವಿರೋಧಿ ಅಲೆ ಇದೆ. ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನ ಗುರುರಾಜ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗೂ, 2018 ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆಗ ಯುಪಿಎ ಸರ್ಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಪರಿಸ್ಥಿತಿ ಬೇರೆ ಆಗಿದೆ. ಪಕ್ಷದಿಂದ ದೂರ ಸರಿದವರೆಲ್ಲಾ ವಾಪಸ್ ಬಂದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರವಿದೆ. ಇಡೀ ರಾಷ್ಟ್ರದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲೇಬೇಕು ಎಂದು ಹೇಳಿದರು.
Advertisement
ರೈತರ ಸಾಲ ಮನ್ನಾ ಎಂಬುದು ಅದು ಬರೀ ನಾಟಕ. ರೈತರು ಪೂರ್ಣ ಸಾಲ ಮನ್ನಾ ಕೇಳಿದ್ರೆ, ಈ ಸರ್ಕಾರ ಸ್ವಲ್ಪ ಭಾಗ ಮಾತ್ರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಬರ ಪರಿಹಾರದ ಹಣ ಚಾಕೋಲೆಟ್, ಲಾಲಿಪಾಪ್ ಕೊಳ್ಳಲೂ ಸಾಧ್ಯವಾಗಷ್ಟು ಕಡಿಮೆ ಪ್ರಮಾಣದಲ್ಲಿ ವಿತರಣೆಯಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ. 18ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗಿವೆ. ಇದರ ಬಗ್ಗೆ ಅರಿವು ಮೂಡಿಸಲು ನಾವು ಬೈಕ್ ರ‍್ಯಾಲಿ ಮಾಡಿದರೆ ಅದನ್ನು ಪ್ರತಿಬಂಧಿಸುತ್ತಾರೆ ಎಂದರು.
Advertisement
ಇದೇ ವೇಳೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತನಾಡಿ, ನವೆಂಬರ್ ನಿಂದ ಡಿಸೆಂಬರ್ ಒಳಗಾಗಿ ಎಲ್ಲಾ 224 ಕ್ಷೇತ್ರಗಳಿಗೆ ಪ್ರವಾಸ ಮಾಡಿ. ಚುನಾವಣಾ ಸಿದ್ಧತೆ ಮಾಡಬೇಕು, ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಆ ಜವಾಬ್ದಾರಿಯನ್ನು ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರು ನಿರ್ವಹಿಸಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಬೇಡ. ಒಂದು ಕ್ಷೇತ್ರಗಳಲ್ಲಿ ಎಷ್ಟು ಜನ ಆಕಾಂಕ್ಷಿಗಳು ಇರ್ತಾರೋ ಎಲ್ಲರೂ ಒಂದೇ ಕಾರಿನಲ್ಲಿ ಓಡಾಡಿ. ಬಿಜೆಪಿ ಅಭ್ಯರ್ಥಿಯ ಗೆಲುವು ನಮಗೆ ಮುಖ್ಯವಾಗಬೇಕು ಅಷ್ಟೇ ಎಂದು ಹೆಳಿದರು.
Advertisement
224 ಕ್ಷೇತ್ರಗಳ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಪಡೆಯಲಿರುವ ಚುನಾವಣಾ ಉಸ್ತುವಾರಿಗಳು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ-ಉಸ್ತುವಾರಿ ಪಿಯೂಷ್ ಗೋಯೆಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಹಾಗೂ ಸಭೆಯಲ್ಲಿ ಬಿಜೆಪಿಯ ಮಾಜಿ, ಹಾಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದರು.