ಬೆಂಗಳೂರು: ಹೆಬ್ಬಾಳದಲ್ಲಿರುವ 45 ಎಕರೆ ಜಾಗವನ್ನು ಬಹುಮಾದರಿ ಸಾರಿಗೆ ಹಬ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಸಂಸ್ಥೆಗೆ (ನಮ್ಮ ಮೆಟ್ರೊ) ಹಸ್ತಾಂತರಿಸಬೇಕು ಎನ್ನುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಆದರೆ, ಈ ಪ್ರಕರಣದಲ್ಲಿ ಇರುವ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡು ಮುಂದುವರಿಯುವುದು ಸೂಕ್ತ ಎನ್ನುವುದಷ್ಟೇ ನಮ್ಮ ಕಳಕಳಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಹೆಬ್ಬಾಳದಲ್ಲಿ ಈಗ ಚರ್ಚೆಯಲ್ಲಿರುವ ಜಮೀನಿನ ಒಟ್ಟು ವಿಸ್ತೀರ್ಣ 55 ಎಕರೆ 13 ಗುಂಟೆ ಇದೆ. ಇದರಲ್ಲಿ ನಮ್ಮ ಮೆಟ್ರೊ ಸಂಸ್ಥೆಯು 45 ಎಕರೆ 5 ಗುಂಟೆಯನ್ನು ತನಗೆ ಹಸ್ತಾಂತರಿಸುವಂತೆ ಕೇಳಿದೆ. ಈ ಸಂಬಂಧವಾಗಿ ತಮ್ಮ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಸಲಾಯಿತು. ಇದರಲ್ಲಿ ಈಗಾಗಲೇ ಇರುವ ಕಾನೂನಿನ ತೊಡಕುಗಳನ್ನು ಮೊದಲು ನಿವಾರಿಸಲು ತೀರ್ಮಾನಿಸಲಾಗಿದೆ. ಇಲ್ಲದೆ ಹೋದರೆ ಇದು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ಈ ಜಮೀನು ತನ್ನದೆಂದು ಹೇಳುತ್ತಿರುವ ಸಂಸ್ಥೆಯ ಯೋಜನೆ ಜಾರಿಗೆ ಇನ್ನೂ ಮೂರು ವರ್ಷಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಇನ್ನೊಂದೆಡೆ, ನ್ಯಾಯಾಲಯದ ಆದೇಶವೂ ಇದೆ. ಹೀಗಾಗಿ ಏಕಾಏಕಿ ಮೆಟ್ರೋ ಸಂಸ್ಥೆಗೆ ಜಮೀನನ್ನು ಹಸ್ತಾಂತರಿಸುವುದು ಮತ್ತಷ್ಟು ಜಟಿಲತೆಗೆ ದಾರಿಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಚಿವನಾಗಿ ಸರ್ಕಾರ ಹಾಗೂ ನ್ಯಾಯಾಲಯದ ಆದೇಶಗಳಿಗೆ ವ್ಯತಿರಿಕ್ತವಾಗಿ ಹೋಗುವುದು ಸರಿಯಲ್ಲ. ಏಕಪಕ್ಷೀಯ ನಿರ್ಧಾರದಿಂದ ಮತ್ತಷ್ಟು ಕಗ್ಗಂಟಾಗುತ್ತದೆ. ಆದ್ದರಿಂದ, ಮೆಟ್ರೋಗೆ ಜಮೀನಿನ ಸುಗಮ ಹಸ್ತಾಂತರಕ್ಕೆ ಇರುವ ದಾರಿ ಯಾವುದು ಎನ್ನುವುದನ್ನು ನೋಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನಾ ಪ್ರವರ್ತಕರೊಂದಿಗಿನ ಮಾತುಕತೆ, ಸೂಕ್ತ ಕಾನೂನು ನೆರವು ಸೇರಿದಂತೆ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಹಬ್ ನಿರ್ಮಾಣವಾದರೆ ಅದರಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಅವಸರದಿಂದಾಗಿ ಇನ್ನಷ್ಟು ಹೊಸ ಸಮಸ್ಯೆ ಉದ್ಭವಿಸಬಾರದು. ಹಾಗೆಯೇ ಹಸ್ತಾಂತರ ಪ್ರಕ್ರಿಯೆ ವಿಳಂಬ ಕೂಡ ಆಗಬಾರದು. ಇದರಿಂದ ಜನಪರ ಯೋಜನೆ ಯೊಂದರ ತ್ವರಿತ ಅನುಷ್ಠಾನಕ್ಕೆ ತೊಡಕು ಉಂಟಾಗುತ್ತದೆ ಎನ್ನುವ ಸ್ಪಷ್ಟ ಅರಿವೂ ನಮಗಿದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಲಾಗುವುದು. ಕಾನೂನು ಪರಿಪಾಲನೆ ಜತೆಗೆ ಅಭಿವೃದ್ಧಿ ನಮ್ಮ ಆದ್ಯತೆ ಆಗಿದೆ. ಈ ವಿಚಾರದಲ್ಲಿ ಸರ್ಕಾರದ ಮುಂದಿರುವ ಅನೇಕ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಟೀಲ ಹೇಳಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಕೆಐಎಡಿಬಿ ಸಿಇಒ ಡಾ.ಮಹೇಶ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.